ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರನ್ನು ಬದಲಾಯಿಸಲಾಗಿದೆ. ಅರುಣ್ ಕುಮಾರ್ ಅವರ ಸ್ಥಾನಕ್ಕೆ ಕಡಬ ಮೂಲದ ಆರ್ ಎಸ್ ಎಸ್ ಪ್ರಚಾರಕ ರಾಜೇಶ್ ಅವರನ್ನು ನಿಯೋಜಿಸಲಾಗಿದೆ.
ಆರ್‌ಎಸ್‌ಎಸ್ ಪ್ರಚಾರಕರಾದ ರಾಜೇಶ್ ಅವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿದೆ. ಅವರು ಬಿಜೆಪಿಗೆ ನಿಯುಕ್ತಿಯಾಗಿದ್ದು, ಸಂಘಟನೆಯನ್ನು ಸೇರಿದ ನಂತರ ಹೊಸ ಹೊಣೆಯನ್ನು ನೀಡಲಾಗುತ್ತದೆ. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಡಬ ಮೂಲದವರಾದ ರಾಜೇಶ್ ತಮ್ಮ ವಿದ್ಯಾಭ್ಯಾಸದ ನಂತರ ಆರ್‌ಎಸ್‌ಎಸ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. 2021ರಲ್ಲಿ ತುಮಕೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಯಾಗಿದ್ದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ನಡೆಯಲಿದ್ದು, ಈ ಸಮಯದಲ್ಲಿ ಸಂಘಟನಾ ಕಾರ್ಯದರ್ಶಿ ಬದಲಾವಣೆ ಅಚ್ಚರಿಗೆ ಕಾರಣವಾಗಿದೆ.
ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಆಗಸ್ಟ್ ತಿಂಗಳಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿತ್ತು. ಆದರೆ ಹದಿನೈದು ದಿನ ಮುಂಚಿತವಾಗಿಯೇ ಈ ಬೆಳವಣಿಗೆ ನಡೆದಿದೆ. ಚುನಾವಣಾ ವರ್ಷದಲ್ಲಿ ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿ ಪಾತ್ರ ಮಹತ್ತರವಾಗಿರುತ್ತದೆ.



























