ಕಲ್ಲಡ್ಕ: ಶಿಕ್ಷಕ ತನ್ನ ಎಲ್ಲಾ ವಿದ್ಯೆಯನ್ನು ಫಲಾಪೇಕ್ಷೆ ಇಲ್ಲದೆ ತನ್ನ ಶಾಲಾ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾನೆ. ತನ್ನ ವೃತ್ತಿ ಧಮ೯ವನ್ನು ಕಾಪಾಡಿಕೊಂಡು ಪೋಷಕರ , ಊರವರ ಸಹಕಾರವನ್ನು ಪಡೆದುಕೊಂಡು ತನ್ನ ಶಾಲೆಯ ಸರ್ವತೋಮುಖವಾದ ಏಳಿಗೆಗೆ ಶ್ರಮಿಸುತ್ತಾನೆ. ಆತನಿಗೆ ಸಂದ ಗೌರವದಿಂದ ಆ ಊರೇ ಸಂಭ್ರಮ ಪಡುತ್ತದೆ. ಇದಕ್ಕೆ ಸಾಕ್ಷಿಯಾದದ್ದು, ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲದ ಸಹ ಶಿಕ್ಷಕರಾದ ಪ್ರವೀಣ್ ಇವರಿಗೆ 2022 -23 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದ್ದು, ಶಾಲಾ ಪೋಷಕರು ಮತ್ತು ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸಹ ಶಿಕ್ಷಕ ಪ್ರವೀಣ್ ಮಾತನಾಡಿ, ಪ್ರಶಸ್ತಿಯ ಹಿಂದೆ ಈ ಶಾಲಾ ವಿಧ್ಯಾರ್ಥಿ ಗಳು, ಪೋಷಕರು, ಶಿಕ್ಷಕರು, ಊರವರ ಮತ್ತು ಸಂಘಸಂಸ್ಥೆಗಳ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಈ ಪ್ರಶಸ್ತಿಯು ಈ ಊರಿನ ಶಾಲಾಭಿಮಾನಿಗಳಿಗೆ ಸಂದ ಗೌರವವಾಗಿದೆ ಎಂದು ತಿಳಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಗೌರವಧನವಾಗಿ ನೀಡಿದ ರೂ 5,000 /-ವನ್ನು ಶಾಲೆಯ ಅಭಿವೃದ್ಧಿಗೆ ಶಾಲಾಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳಿದ್ದ ಉತ್ತಮ ಶಿಕ್ಷಕ ಎನ್ನುವ ಪ್ರಹಸನ ಹಾಗೂ ಶಾಲಾ ವಿದ್ಯಾರ್ಥಿಗಳು ಶಿಕ್ಷಕ ಪ್ರವೀಣರ ಬಗ್ಗೆ ಸ್ವ ಬರೆದ ಚುಟುಕು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಲ್ಲಾ ಮಕ್ಕಳಿಗೆ ನಳಿನಾಕ್ಷಿ ಈಶ್ವರ ಕುಲಾಲ್ ಕೊಡುಗೆಯಾಗಿ ನೀಡಿದ ಗುರುತಿನ ಕಾರ್ಡನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಕುಲಾಲ್, ಉಪಾಧ್ಯಕ್ಷೆ ಚಂಚಲಾಕ್ಷಿ, ನೆಟ್ಲಶಾಲಾ ನಿವೃತ್ತ ಮುಖ್ಯೋಪಾಧ್ಯಾಯಣಿ ಸೆಲಿನಾ ಪಿಂಟೋ, ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತಾ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಮನೋಜ್ ವಂದಿಸಿದರು. ಕಲಾ ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು . ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು , ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಮಕ್ಕಳ ಪೋಷಕರು,ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
