ಬೆಳ್ಳಾರೆ: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಶಫೀಕ್ ಬೆಳ್ಳಾರೆಯ ಸಹೋದರನನ್ನು ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ, ಇಬ್ರಾಹಿಂ ಎಂಬವರ ಪುತ್ರ ಸಫ್ರಿದ್ ಎಂದು ಗುರುತಿಸಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂದೂ ಕಾರ್ಯಕರ್ತ ಪ್ರಶಾಂತ್ ರೈ ಎಂಬವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಬೆಳ್ಳಾರೆಯ ಪೊಲೀಸ್ ಠಾಣೆಯ ಎದುರು ಕ್ರಮಕ್ಕೆ ಆಗ್ರಹಿಸಿ ಹಿಂದೂ ಪರ ಕಾರ್ಯಕರ್ತರು ನೆರೆದಿದ್ದರು. ಈ ಹಿನ್ನೆಲೆಯಲ್ಲಿ ಸಫ್ರಿದ್ ಎಂಬವವನನ್ನು ಬಜ್ಪೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದೀಗ ಆತನನ್ನು ಬೆಳ್ಳಾರೆ ಠಾಣೆಗೆ ಕರೆತಂದಿರುವುದಾಗಿ ತಿಳಿದು ಬಂದಿದೆ.
ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ನ ಮ್ಯಾನೇಜರ್ ಪ್ರಶಾಂತ್ ರೈ ಅವರಿಗೆ ಕೊಲೆ ಆರೋಪಿ ಶಫೀಕ್ ತಮ್ಮ ಸಫ್ರಿದ್ ಎಂಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು.
ಆರೋಪಿಸಲಾಗಿರುವ ಸಫ್ರಿದ್ ಕೊಲೆಯಾದ ಪ್ರವೀಣ್ ನೆಟ್ಟಾರ್ ಅವರ ಕೋಳಿ ಫಾರ್ಮ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಎಂಬವರ ಪುತ್ರನಾಗಿದ್ದು, ಶಫೀಕ್ ಸಹೋದರನಾಗಿದ್ದಾನೆ. ನಿನ್ನೆ ಸಂಜೆ ಪ್ರಶಾಂತ್ ರೈಯವರಿಗೆ ಕರೆ ಮಾಡಿರುವ ಸಫ್ರಿದ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ ಕೊಲ್ಲುವುದಾಗಿ ಬೆದರಿಸಿರುವುದಾಗಿಯೂ ಆರೋಪಿಸಲಾಗಿತ್ತು.