ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಏ.10 ರಿಂದ 20 ರ ವರೆಗೆ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯಲಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಈ ಬಾರಿಯ ವಾರ್ಷಿಕ ಜಾತ್ರೋತ್ಸವವನ್ನು ಯಾವುದೇ ವಿಧಿ ವಿಧಾನಗಳಿಗೆ ಚ್ಯುತಿಯಾಗದಂತೆ ನಡೆಸಲಾಗುತ್ತದೆ.
ಸೀಮೆಯ ಭಕ್ತಾಧಿಗಳು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಜಾತ್ರಾ ಸಂದರ್ಭದಲ್ಲಿ ಪಾಲಿಸಬೇಕು, ಭಕ್ತಾಧಿಗಳು ಮಾಸ್ಕ್ ಧರಿಸಿ ದೇವಾಲಯದ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಜರಗುವ ಜಾತ್ರೋತ್ಸವದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಯಾವುದೇ ಜನದಟ್ಟನೆಗೆ ಅವಕಾಶವಾಗದ ರೀತಿಯಲ್ಲಿ ಭಾಗಿಗಳಾಬೇಕು, ಪುತ್ತೂರು ಜಾತ್ರೆಯ ಧ್ವಜಾರೋಹಣದಿಂದ ತೊಡಗಿ ಪೇಟೆ ಸವಾರಿ, ಚಂದ್ರಮಂಡಲ ಉತ್ಸವ, ಬಲ್ನಾಡು ಶ್ರೀ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು ಆಗಮನ, ಸಣ್ಣ ರಥೋತ್ಸವ, ಬ್ರಹ್ಮ ರಥೋತ್ಸವ, ವೀರಮಂಗಲ ಅವಭ್ರತ ಸವಾರಿ, ದೈವಗಳ ನೇಮ ಸಹಿತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ.
ಪೇಟೆ ಸವಾರಿಯ ಸಂದರ್ಭ ಭಕ್ತರು ದೇವರು ಬರುವ ದಾರಿಯಲ್ಲಿ ತಮ್ಮ ಮನೆ, ಅಂಗಡಿಗಳ ಮುಂದೆ ನಿಂತು ಶ್ರೀ ದೇವರಿಗೆ ಆರತಿ, ಹಣ್ಣುಕಾಯಿ ಸಲ್ಲಿಸುವ ಮೂಲಕ ಪೇಟೆ ಸವಾರಿಯಲ್ಲಿ ಸಂಖ್ಯಾ ಮಿತಿಗಿಂತ ಹೆಚ್ಚು ಮಂದಿ ಭಾಗವಹಿಸದೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.