ಮಾಣಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ವೇದಿಕೆಗಳು ಬೇಕು ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಉತ್ತಮವಾದ ಅವಕಾಶವನ್ನು ಕಲ್ಪಿಸಿಕೊಡುತ್ತವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ ವಿದ್ಯಾಭಿವರ್ಧಕ ಸಂಘ (ರಿ) ಮಾಣಿ, ಕರ್ನಾಟಕ ಪ್ರೌಢಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಮಾಣಿ ,ರೋಟರಿ ಕ್ಲಬ್ ಮಾಣಿ , ಲಯನ್ಸ್ ಕ್ಲಬ್ ಮಾಣಿ ಇದರ ಆಶ್ರಯದಲ್ಲಿ ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಣಿ ಪ್ರೌಢಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆಯವರು ಮಾತನಾಡಿದರು.


ಶಿಕ್ಷಣ ವ್ಯವಸ್ಥೆಯ ಹಲವು ಕಾರ್ಯಕ್ರಮಗಳು ಮಕ್ಕಳ ಉತ್ತಮ ಭವಿಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳಲ್ಲಿ ಇವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಕ್ಕಳ ಭವಿಷ್ಯವು ಉತ್ತಮವಾಗುವಲ್ಲಿ ಇಂತಹ ಕಾರ್ಯಕ್ರಮಗಳು ಬಹುಮುಖ್ಯವಾಗಿದೆ ಎಂದು ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರಾದ ರೊಟೋರಿಯನ್ ಪುಷ್ಪರಾಜ್ ಹೆಗ್ಡೆ ರವರು ತಿಳಿಸಿದರು.

ಸ್ವರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯಬೇಕು ಆಗ ಮಾತ್ರ ಮಕ್ಕಳಿಗೆ ಇದರ ಅನುಭವವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಂಯೋಜಕಿ ಸುಜಾತ ತಿಳಿಸಿದರು. ಈಗಿನ ಶಿಕ್ಷಣ ಪದ್ದತಿಯು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ ಕ್ರಿಯಾಶೀಲತೆಯ ಮೂಲಕ ಸಾಧನೆ ಸಾಧಿಸಲು ಹಲವು ಹಂತಗಳಲ್ಲಿ ಪ್ರತಿಭೆಯು ಅರಳಲು ಅವಕಾಶ ಮಾಡಿಕೊಡುತ್ತದೆ ಎಂದು ಲಯನ್ಸ್ ಕ್ಲಬ್ ಮಾಣಿ ಇದರ ಅಧ್ಯಕ್ಷ ಉಮೇಶ್ ಬರಿಮಾರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ಸುಧಾ , ಸಮೂಹ ಸಂಪನ್ಮೂಲ ವ್ಯಕ್ತಿ ಮೆಡಿಲ್ಡಾ ಲೋಬ, ಸುಧಾಕರ ಭಟ್, ಸತೀಶ್ ರಾವ್, ಮಾಣಿ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಗಂಗಾಧರ್ ರೈ, ಶಾಲಾ ಸಂಚಾಲಕ ಇಬ್ರಾಹಿಂ ಕೆ, ಉಪಾಧ್ಯಕ್ಷ ಮಹಮ್ಮ ಅಬೀಬ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಜತ್ತಪ್ಪ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರೇಷ್ಮಾ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ಮೊದಲಾದವರು ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ವಿ ಕೆ ಭಂಡಾರಿ ಸ್ವಾಗತಿಸಿ, ಹಿರಿಯ ಶಿಕ್ಷಕ ಬಾಲಕೃಷ್ಣ ಧನ್ಯವಾದವಿತ್ತರು. ಜಯರಾಮ್ ಕಾಂಚನ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕಾರಂಜಿಯಲ್ಲಿ ಕಲ್ಲಡ್ಕ ವಲಯ ಮಟ್ಟದ 12 ಪ್ರೌಢಶಾಲೆ ಹಾಗೂ 13 ಉನ್ನತೀಕರಿಸಿದ ಶಾಲಾ ಮಕ್ಕಳು ಭಾಗವಹಿಸಿದ್ದರು.

