ಉಪ್ಪಿನಂಗಡಿ: ತನ್ನ ಹೆಸರಿನ ವಚ್ಯುವಲ್ ಖಾತೆಗೆ ನೆಫ್ಟ್ ಮೂಲಕ ಹಣ ಜಮೆ ಮಾಡಿದಾಗ ಆ ಹಣ ವಚ್ಯುವಲ್ ಖಾತೆಗೆ ಜಮೆಯಾಗದೆ ಬೇರೊಬ್ಬರ ಖಾತೆಗೆ ಜಮೆಯಾದ ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕೃಷಿಕರೊಬ್ಬರು ಗೃಹ ನಿರ್ಮಾಣ ಯೋಜನೆ ಯೊಂದರ ಅಂಗವಾಗಿ ಇಂಪ್ಯಾಕ್ಟ್ ಗುರು ಟೆಕ್ನಾಲಜಿ ಪ್ರೈ. ಲಿಮಿಟೆಡ್ ಮುಂಬಯಿ ಎನ್ನುವ ಸಂಸ್ಥೆಯಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಅದರನ್ವಯ ಬ್ಯಾಂಕ್‌ನಲ್ಲಿ ವಚ್ಯುವಲ್ ಖಾತೆಯನ್ನು ತೆರೆದಿದ್ದರು. ಆ ಖಾತೆಗೆ ಹಣದ ವರ್ಗಾವಣೆಯಂತಹ ಪ್ರಕ್ರಿಯೆಗಳು ಯಾವುದೇ ಲೋಪವಿಲ್ಲದೆ ನಡೆದಿದ್ದವು. ಈ ಮಧ್ಯೆ ಸಂಸ್ಥೆಯ ಸಚಿನ್ ಅವರು ಮತ್ತಷ್ಟು ಗೃಹ ನಿರ್ಮಾಣದ ಯೋಜನೆಗಳ ಸೌಲಭ್ಯವನ್ನು ಒದಗಿಸಲಾಗುವುದೆಂದು ನಂಬಿಸಿ ಕೋಟಕ್ ಮಹೇಂದ್ರ ಬ್ಯಾಂಕ್ ಖಾತೆಯಲ್ಲಿದೆ ಎನ್ನಲಾದ ವಚ್ಯುವಲ್ ಖಾತೆಗೆ ಹಣ ಜಮೆ ಮಾಡಿರೆಂದು ಹೇಳಿದ ಹಿನ್ನೆಲೆಯಲ್ಲಿ 1,89,822 ರೂ. ಹಣವನ್ನು ನೆಫ್ಟ್ ಮೂಲಕ ಜಮೆ ಮಾಡಿದ್ದರು. ಆ ಹಣ ವರ್ಗಾವಣೆಯು ದೂರುದಾರರ ಬ್ಯಾಂಕ್ ಖಾತೆಯಲ್ಲಿ ಅವರದ್ದೇ ಹೆಸರಿನ ಖಾತೆಗೆ ಜಮೆಯಾಗಿರುವುದನ್ನು ತೋರಿಸುತ್ತಿತ್ತು.
ಈ ಮಧ್ಯೆ ಮೂಡಿದ ಸಂದೇಹವನ್ನು ನಿವಾರಿಸುವ ಸಲುವಾಗಿ ಕೋಟಕ್ ಮಹೇಂದ್ರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಆ ಖಾತೆಯು ಸುದೇಶ್ ಮುರುಗನ್ ಅವರ ಹೆಸರಿನಲ್ಲಿರುವುದು ಪತ್ತೆಯಾಗಿತ್ತು. ಕಳುಹಿಸಲಾದ ಎಲ್ಲ ಹಣ ಅದೇ ಖಾತೆಗೆ ಜಮೆಯಾಗಿ ರುವುದು ಕಂಡುಬಂದಿತ್ತು. ವಿಚಾರಣೆಯ ವೇಳೆ ಆ ಖಾತೆಯು ಅಂತರ್ಜಾಲ ವ್ಯವಸ್ಥೆಯಡಿ ತೆರೆಯಲಾದ ಖಾತೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಹಣ ಕಳುಹಿಸಲಾದ ಎಲ್ಲ ವಿವರಗಳನ್ನು ದಾಖಲಿಸಿ ವಂಚನೆಗೀಡಾದ ವ್ಯಕ್ತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ನೆಫ್ಟ್ ಅರ್ಜಿ ಫಾರಂನಲ್ಲಿ ಉಲ್ಲೇಖಿಸಲಾದ ಬೆನಿಫೀಶರಿಯ ಹೆಸರಿಗೆ ಬದಲಾಗಿ ಅನ್ಯ ಹೆಸರಿನ ಖಾತೆಗೆ ಹಣ ಜಮೆಯಾಗಬೇಕಾದರೆ ಒಟ್ಟು ವ್ಯವಸ್ಥೆಯಡಿ ವಂಚಕರು ನುಸುಳಿರುವ ಸಾಧ್ಯತೆ ಇದೆ ಎನ್ನಲಾಗಿದೆ.