ಚಂಡೀಗಢ: ವಿದ್ಯಾರ್ಥಿನಿಯೊಬ್ಬರು ತನ್ನ ಹಾಸ್ಟೆಲ್ ಸಹಪಾಠಿಗಳ ಖಾಸಗಿ ವಿಡಿಯೊಗಳನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪಂಜಾಬ್ನ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ವಿಡಿಯೊ ಲೀಕ್ ಮಾಡಿದ ಬಾಲಕಿಯನ್ನು ಬಂಧಿಸಲಾಗಿದೆ.

ಹಾಸ್ಟೆಲ್ನಲ್ಲಿ ಯುವತಿಯರು ಸ್ನಾನ ಮಾಡುತ್ತಿರುವಾಗ ಯಾರೋ ವಿಡಿಯೊ ಚಿತ್ರೀಕರಿಸಿ, ಆನ್ಲೈನ್ನಲ್ಲಿ ಸೋರಿಕೆ ಮಾಡಿದ್ದಾರೆ. ಈ ಬೆಳವಣಿಗೆಯ ನಂತರ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ವಿಶ್ವವಿದ್ಯಾಲಯದ ಆಡಳಿತವು ಪ್ರತಿಭಟನೆಯನ್ನು ಹತ್ತಿಕ್ಕಲು, ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾವು ಅಥವಾ ಆತ್ಮಹತ್ಯೆಯ ಪ್ರಯತ್ನಗಳು ವರದಿಯಾಗಿಲ್ಲ ಎಂದು ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೋನಿ ಹೇಳಿದ್ದಾರೆ.
‘ಇದು ಹಾಸ್ಟೆಲ್ನ ವಿದ್ಯಾರ್ಥಿನಿಯೊಬ್ಬರು ಚಿತ್ರೀಕರಿಸಿ, ಆನ್ಲೈನ್ನಲ್ಲಿ ಹಂಚಿಕೊಂಡ ವಿಡಿಯೊಗೆ ಸಂಬಂಧಿಸಿದ ವಿವಾದವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೆ ಆತ್ಮಹತ್ಯೆಯ ಯಾವುದೇ ಪ್ರಯತ್ನ (ಸಾಯುವ ಮೂಲಕ) ವರದಿಯಾಗಿಲ್ಲ. ವಿದ್ಯಾರ್ಥಿಗಳ ವೈದ್ಯಕೀಯ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಅವರು ಹೇಳಿದ್ದಾರೆ.
ವೀಡಿಯೊ ಸೋರಿಕೆಯಾದ ನಂತರ ಹಲವು ಹುಡುಗಿಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಪೊಲೀಸರು ತಳ್ಳಿಹಾಕಿದ್ದಾರೆ. ಮೂರ್ಛೆ ಹೋಗಿದ್ದ ಒಬ್ಬ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವಳ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
