ಪುತ್ತೂರು: ಕುಂಜಾಡಿ ಕೆಳಗಿನ ಮನೆಯಲ್ಲಿ ನಡೆಯುತ್ತಿರುವ ಧರ್ಮನೇಮ ಅನೇಕ ಹೊಸತನಗಳಿಗೆ ಸಾಕ್ಷಿಯಾಯಿತು.ಗ್ರಾಮೀಣ ಭಾಗದಲ್ಲಿ ಭೂತ ನೇಮಗಳು ಸಾಮಾನ್ಯವೇ ಆದರೂ ಅರವತ್ತು ವರ್ಷಗಳ ಬಳಿಕ ನಡೆಯುತ್ತಿರುವ ಈ ಧರ್ಮನೇಮ ವಿಜೃಂಭಣೆಯಿಂದ ಕಂಗೊಳಿಸುತ್ತಿತ್ತು.ದ.ಕ ಸಂಸದ ಹಾಗೂ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದ ಕಾರ್ಯಕ್ರಮವಾದ್ದರಿಂದ ಅನೇಕ ಜನ ಪ್ರತಿನಿಧಿಗಳು,ಸಚಿವರು ಹಾಗೂ ಸಂಸದರು ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದ್ದರು.
ಭವ್ಯವಾದ ವಿಶ್ರಾಂತಿ ಕೊಠಡಿ : ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರುಗಳಿಗೆ ಹಾಗೂ ಮುಖ್ಯ ಅತಿಥಿಗಳಿಗಾಗಿ ತರವಾಡು ಮನೆಯ ಪಕ್ಕದಲ್ಲೇ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಿದ್ದು.ಗ್ರಾಮೀಣ ಭಾಗಕ್ಕೆ ಇದು ಹೊಸ ಹಾಗೂ ಆಸಕ್ತಿದಾಯಕ ವಿಚಾರವಾಗಿತ್ತು.
ನಿರಂತರ ಭೋಜನ ವ್ಯವಸ್ಥೆ : ಧರ್ಮನೇಮದಲ್ಲಿ ದಾನ-ಧರ್ಮಕ್ಕೆ ಮೊದಲ ಪ್ರಾಶಸ್ತ್ಯ.ಅಂತೆಯೇ ಕೆಳಗಿನ ಕುಂಜಾಡಿಯಲ್ಲೂ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ನಿರಂತರ ಅನ್ನದಾನ ಹಾಗೂ ಉಪಹಾರದ ವ್ಯವಸ್ಥೆ ನಡೆಯಿತು.ಬೆಳಗ್ಗೆ ಮತ್ತು ಸಂಜೆ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿ ಭೋಜನವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿದರು. ಒಂದೆಡೆ ಬಫೆ ವ್ಯವಸ್ಥೆ ಯಿದ್ದರೆ ಇನ್ನೊಂದೆಡೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.ದಣಿದು ಬಂದವರಿಗೆ ಪಾನೀಯ,ಕಬ್ಬು ಜ್ಯೂಸ್ ಹಾಗೂ ಮಜ್ಜಿಗೆ ನೀಡಲಾಯಿತು.
ಮೂರು ಕಡೆಗಳಿಂದ ದೈವದ ಭಂಡಾರದ ಆಗಮನ : ಕೆಳಗಿನ ಕುಂಜಾಡಿಯಲ್ಲಿ ಎರಡು ದಿನಗಳ ಕಾಲ ದೈವಾರಧನೆ ನಡೆಯಲಿದ್ದು ದೈವಗಳ ಭಂಡಾರವು ಎ.8 ರ ಬೆಳಗ್ಗೆ ಬ್ಯಾಂಡ್ ವಾದನಗಳೊಂದಿಗೆ ಆಗಮಿಸಿತು.ಮೂರು ಮನೆಗಳಿಂದ ಭಂಡಾರ ಬಂದಿದ್ದು ಬಂಬಿಲ ಗುತ್ತಿನ ಮನೆಯಿಂದ ಉಲ್ಲಾಕ್ಲು ದೈವ ಪಡ್ಯೊಟ್ಟು ಮನೆಯಿಂದ ಗ್ರಾಮದೈವ ಅಬ್ಬೆಜಾಲಾಯ,ಸರ್ವೆ ಮನೆಯಿಂದ ಪಿಲಿಭೂತ,ವರ್ಣರ ಪಂಜುರ್ಲಿ,ಜಾವತೆ,ಕಲ್ಲುರ್ಟಿ,ಗುಳಿಗ ದೈವಗಳ ಭಂಡಾರ ಹಾಗೂ ಕುಂಜಾಡಿ ಮೂಲಸ್ಥಾನದಿಂದ ರಕ್ತೇಶ್ವರಿ ದೈವದ ಭಂಡಾರ ತಂದು ರಾತ್ರಿಯ ವೇಳೆ ನೇಮ ಜರುಗಿತು.ನಿರಂತರ ಪ್ರಸಾದ ವಿತರಣೆಯು ನಡೆಯಿತು.
ಅಲಂಕಾರ ಭೂಷಿತವಾದ ಕೆಳಗಿನ ಕುಂಜಾಡಿ : ಕೆಳಗಿನ ಕುಂಜಾಡಿ ಧರ್ಮನೇಮದ ಪವಿತ್ರ ಭೂಮಿ ಅಲಂಕಾರ ಭೂಷಿತವಾಗಿ ಕಂಗೊಳಿಸುತ್ತಿತ್ತು.ಗೂಡುದೀಪಗಳು,ಬೆದುರು ಗೊಂಬೆಗಳು ಹಾಗೂ ಬಣ್ಣ-ಬಣ್ಣದ ವಿದ್ಯುತ್ ದೀಪಗಳು ಧರ್ಮನೇಮದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು,ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಂಬಳ ಕೋಣವನ್ನು ಓಡಿಸುವ ಸ್ತಬ್ಧಚಿತ್ರ ಎಲ್ಲರನ್ನೂ ಸೆಳೆಯುತ್ತಿತ್ತು,ಕಟೀಲು ದೇವಿಯ ಗುಡಿಯ ಚಿತ್ರಣ,ಗಣಪತಿ ವಿಗ್ರಹದ ಅಲಂಕಾರಗಳು ಮತ್ತಷ್ಟು ಧಾರ್ಮಿಕ ಭಾವನೆಯ ಬೀಜ ಬಿತ್ತಿದವು.ದೈವಗಳು ನರ್ತಿಸುವ ಕೊಡಿಯಡಿಯು ವಿಶಾಲವಾಗಿದ್ದು ಅಡಿಕೆ,ಸಿಹಿಯಾಳಗಳಿಂದ ವಿಶಿಷ್ಠವಾಗಿ ಸಿಂಗರಿಸಲ್ಪಟ್ಟಿತ್ತು.
ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆ : ಇಷ್ಟೆಲ್ಲಾ ಸಂಭ್ರಮದ ನಡುವೆಯೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಯಿತು.ಧರ್ಮನೇಮಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಧರ್ಮಲ್ ಸ್ಕ್ರೀನಿಂಗ್,ಸ್ಯಾನಿಟೈಸಿಂಗ್ ಮಾಡಿ ಮಾಸ್ಕ್ ಹಾಕುವಂತೆ ಸೂಚಿಸಲಾಗಿತ್ತು.ಜೊತೆಗೆ ಉಚಿತ ಮಾಸ್ಕ್ ವಿತರಣೆಯೂ ನಡೆಯಿತು. ಧ್ವನಿವರ್ಧಕ ಗಳ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಸೂಚಿಸಲಾಗುತ್ತಿತ್ತು.ಒಟ್ಟಿನಲ್ಲಿ ಕೆಳಗಿನ ಕುಂಜಾಡಿಯಲ್ಲಿ ಧರ್ಮನೇಮವು ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.