ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು 2010 ರಲ್ಲಿ ತಮ್ಮ ಮದುವೆಯ ಬಗ್ಗೆ ಜಗತ್ತಿನ ಮುಂದೆ ಅಧಿಕೃತವಾಗಿ ಘೋಷಣೆ ಮಾಡಿದರು. ಆಗ ಭಾರತ ಹಾಗೂ ಪಾಕಿಸ್ತಾನದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಯಿತು. ಅಂದಿನಿಂದ ಇಂದಿನವರೆಗೂ ಅವರಿಬ್ಬರ ದಾಂಪತ್ಯದ ಬಗ್ಗೆ ಹಲವು ರೂಮರ್ಸ್ ಹರಡುತ್ತಲೇ ಇದೆ. ಈಗ ಮತ್ತೆ ಅವರಿಬ್ಬರೂ ದೂರವಾಗುತ್ತಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದೆ.
ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪಾಕಿಸ್ತಾನಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ ಪೋಸ್ಟ್ನಿಂದ ಈ ಎಲ್ಲಾ ವದಂತಿಗಳಿಗೆ ರೆಕ್ಕೆಪುಕ್ಕ ಸಿಕ್ಕಿದೆ.
ಕೆಲವು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದ ಸಾನಿಯಾ ಅದರಲ್ಲಿ “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು” ಎಂದು ಬರೆದುಕೊಂಡಿದ್ದರು. ಅಲ್ಲಿಂದ ಈ ಕ್ರೀಡಾ ದಂಪತಿಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಟಾಕ್ ಶುರುವಾಗಿತ್ತು. ಅದೂ ಸಾಲದೆಂಬಂತೆ ಇತ್ತೀಚೆಗೆ ದಂಪತಿಗಳು ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್ ಅವರ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದರು. ಅದರ ಫೋಟೋಗಳನ್ನು ಶೋಯೆಬ್ ಮಲಿಕ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಆದರೆ ಸಾನಿಯಾ ಇದರ ಬಗ್ಗೆ ಒಂದೇ ಒಂದು ಪೋಸ್ಟ್ ಕೂಡ ಹಾಕಿರಲಿಲ್ಲ. ಇದು ಕೂಡ ಹರಿದಾಡುತ್ತಿದ್ದ ವದಂತಿಗೆ ಪುಷ್ಠಿ ನೀಡಿತ್ತು.
ಶೋಯೆಬ್ ಮಲಿಕ್ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾರೆ ಎಂದು ಪಾಕಿಸ್ತಾನದ ಹಲವು ಮಾಧ್ಯಮಗಳು ಹೇಳಿವೆ. ಭಾರತೀಯ ಟೆನಿಸ್ ಸುಂದರಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿವೆ. ಸಾನಿಯಾ ಕಳೆದ ಕೆಲವು ದಿನಗಳಿಂದ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹಲವು ವಿಚಾರ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಶೋಯೆಬ್ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಅವರು ಇನ್ನೂ ಒಂದೇ ಒಂದು ಮಾತನ್ನು ಹೇಳಿಲ್ಲ.

2010 ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿವಾಹವಾಗುವುದಾಗಿ ಹೇಳಿಕೆ ನೀಡಿದಾಗ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈ ಎಲ್ಲಾ ಟೀಕೆಗಳಿಗೆ ಸೊಪ್ಪು ಹಾಕದ ಈ ಜೋಡಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಹಲವರು ಈ ಜೋಡಿ ಹೆಚ್ಚು ವರ್ಷ ಜೊತೆಯಾಗಿ ಬಾಳುವುದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಎಲ್ಲರ ಮಾತುಗಳನ್ನು ಸುಳ್ಳು ಮಾಡಿದ್ದ ಈ ಜೋಡಿ 12 ವರ್ಷಗಳ ಕಾಲ ಜೊತೆಗೆ ಜೀವನ ನಡೆಸಿತ್ತು. ಅಲ್ಲದೆ ಈ ದಂಪತಿಗಳಿಗೆ 2018 ರಲ್ಲಿ ಗಂಡು ಮಗು ಕೂಡ ಜನಿಸಿತ್ತು. ಆದರೆ 12 ವರ್ಷಗಳ ವೈವಾಹಿಕ ಬದುಕಿಗೆ ವಿದಾಯ ಹೇಳಲು ಮುಂದಾಗಿವೆ ಎಂದು ಹಲವು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಸಾನಿಯಾ ಆಗಲಿ, ಶೋಯೆಬ್ ಆಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಇಬ್ಬರೂ ತಮ್ಮ ತಮ್ಮ ವೃತ್ತಿಗಳಲ್ಲಿ ಬಹಳ ಪ್ರಸಿದ್ಧರು. ಶೋಯೆಬ್ ಮಲಿಕ್ ಅವರನ್ನು ಪಾಕಿಸ್ತಾನದ ಕ್ರಿಕೆಟಿಗ ಎಂದು ಪರಿಗಣಿಸಿದರೆ, ಸಾನಿಯಾ ಮಿರ್ಜಾ ಅವರನ್ನು ಭಾರತದ ಪ್ರಸಿದ್ಧ ಟೆನಿಸ್ ತಾರೆ ಎಂದು ಪರಿಗಣಿಸಲಾಗಿದೆ. ಮತ್ತು ಗಂಡ ಮತ್ತು ಹೆಂಡತಿ ಇಬ್ಬರೂ ಆಗಾಗ್ಗೆ ತಮ್ಮ ಪ್ರೀತಿಯನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ ಆದರೆ ಅವರ ಬಿಡುವಿಲ್ಲದ ಜೀವನದಿಂದಾಗಿ ಇಬ್ಬರೂ ದೂರವಾಗುತ್ತಾರೆ ಎನ್ನುವ ವದಂತಿ ಮತ್ತೆ ದಟ್ಟವಾಗಿದೆ..


























