ನವದೆಹಲಿ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಹಾಗೂ 12ನೇ ತರಗತಿ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಸಚಿವಾಲಯ, 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಮತ್ತು 12 ನೇ ತರಗತಿಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಂಡಳಿಯು ಅಭಿವೃದ್ಧಿಪಡಿಸಬೇಕಾದ ವಸ್ತುನಿಷ್ಠ ಮಾನದಂಡದ ಆಧಾರದ ಮೇಲೆ 10 ನೇ ತರಗತಿಯ ಫಲಿತಾಂಶ ನಿಗದಿಪಡಿಸುತ್ತದೆ. 12 ನೇ ತರಗತಿ ಪರೀಕ್ಷೆಗಳು ನಂತರ ನಡೆಯಲಿವೆ. ಜೂನ್ 1 ರಂದು ಪರಿಸ್ಥಿತಿಯ ಅವಲೋಕನ ನಡೆಸಲಾಗುವುದು ಎಂದು ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ನಡುವೆ ಸಿಬಿಎಸ್ಇ ಪರೀಕ್ಷೆ ನಡೆಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸಿಬಿಎಸ್ಇ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಕೋರಿ 2 ಲಕ್ಷಕ್ಕೂ ಹೆಚ್ಚು ಪಿಟಿಷನ್ ಸಲ್ಲಿಸಲಾಗಿತ್ತು. ಈ ನಿಟ್ಟಿನಲ್ಲಿ ಸಿಬಿಎಸ್ಇ ಬೋರ್ಡ್ನ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಿದ್ದರು. ಈ ಬೆನ್ನಲ್ಲೇ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ.