ಕತಾರ್‌ನ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ 2022 (FIFA World Cup 2022)ರ ಅಂತಿಮ ಪಂದ್ಯದಲ್ಲಿ ಪೆನಾಲ್ಟಿ ಶೂಟ್-ಔಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸುವುದರೊಂದಿಗೆ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ.
ಈ ವಿಶ್ವಕಪ್ ಗೆಲುವಿನೊಂದಿಗೆ ಲಿಯೋನೆಲ್ ಮೆಸ್ಸಿ ತಮ್ಮ ಅಂತರಾಷ್ಟ್ರೀಯ ಫುಟ್ಬಾಲ್ ವೃತ್ತಿ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಫೈನಲ್ ಪಂದ್ಯ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಮೆಸ್ಸಿ ಈಗಾಗಲೇ ಹೇಳಿದ್ದರು. ಮೆಸ್ಸಿ ಅವರ ಸಂಪುಟದಲ್ಲಿ ವಿಶ್ವಕಪ್ ಟ್ರೋಫಿ ಇರಲಿಲ್ಲ, ಈಗ ಅದು ಕೂಡ ಮೆಸ್ಸಿ ಖಾತೆಗೆ ಜಮಾವಣೆಗೊಂಡಿದೆ. ಇದರೊಂದಿಗೆ ಮೆಸ್ಸಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ ತನ್ನ 36 ವರ್ಷಗಳ ವಿಶ್ವಕಪ್ ಬರವನ್ನು ನೀಗಿಸಿಕೊಂಡಿದೆ.
ರಷ್ಯಾದಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್ ತಂಡಕ್ಕೆ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ವೇಳೆ ಫ್ರಾನ್ಸ್ ಈ ಬಾರಿಯೂ ಚಾಂಪಿಯನ್ ಪಟ್ಟಕ್ಕೇರಿದ್ದರೆ, ಬ್ರೆಜಿಲ್ ಹಾಗೂ ಇಟಲಿ ನಂತರ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ತಂಡವಾಗುತ್ತಿತ್ತು. ಈ ಮೊದಲು ಇಟಲಿ 1934 ಮತ್ತು 1938 ರಲ್ಲಿ ಸತತ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದಿತ್ತು. ಬಳಿಕ ಬ್ರೆಜಿಲ್ 1958 ಮತ್ತು 1962 ರಲ್ಲಿ ಸತತ ಎರಡು ಬಾರಿ ವಿಶ್ವಕಪ್ ಗೆದ್ದಿತು.