ಮುಂಬೈ: ಟೀಂ ಇಂಡಿಯಾದ ಹೊಡಿಬಡಿ ಆಟಗಾರ, ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ತೋರಿದ ಅಬ್ಬರದ ಬ್ಯಾಟಿಂಗ್ ನೋಡಿ ಕನ್ನಡಿಗ ಕೆ.ಎಲ್ ರಾಹುಲ್ ‘ಭಾರೀ ಎಡ್ಡೆ ಗೊಬ್ಬಿಯ ಸೂರ್ಯ’ (ತುಂಬಾ ಚೆನ್ನಾಗಿ ಆಟವಾಡಿದೆ) ಎಂದು ಸಾಮಾಜಿಕ ಜಾಲತಾಣದ ಮೂಲಕ ತುಳು ಭಾಷೆಯಲ್ಲಿ ಪ್ರಶಂಸಿದ್ದರು. ಈ ಪೋಸ್ಟ್ಗೆ ಕಾಮೆಂಟ್ ಮಾಡಿರುವ ಸೂರ್ಯ ಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರಿಗೆ ತುಳು ಕಲಿಸುವಂತೆ ಮನವಿ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಮಿಸ್ಟರ್ 360 ಡಿಗ್ರಿ ಪ್ಲೇಯರ್ ಖ್ಯಾತಿಯ ಸೂರ್ಯ ತನ್ನ ವಿಸ್ಫೋಟಕ ಆಟದ ಮೂಲಕ ರಾಜ್ಕೋಟ್ನಲ್ಲಿ ರಾಜನಾಗಿ ಮೆರೆದಾಡಿದ್ದರು. ಬ್ಯಾಟಿಂಗ್ನಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸಿದ ಸೂರ್ಯನ ಆಟ ಕಂಡು ಅಭಿಮಾನಿಗಳು ದಂಗಾಗಿದ್ದರು. ಈ ಆಟ ಕಂಡ ಟೀಂ ಇಂಡಿಯಾದ ಇನ್ನೋರ್ವ ಆಟಗಾರ, ಮಂಗಳೂರು ಮೂಲದ ಕೆ.ಎಲ್ ರಾಹುಲ್ ‘ಬಾರಿ ಎಡ್ಡೆ ಗೊಬ್ಬಿಯ ಸೂರ್ಯ’ (ತುಂಬಾ ಚೆನ್ನಾಗಿ ಆಟವಾಡಿದೆ) ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೂಲಭಾಷೆ ತುಳುವಿನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ಸೂರ್ಯಕುಮಾರ್ ಯಾದವ್ ಅವರ ಪತ್ನಿ ಕರಾವಳಿ ಮೂಲದವರಾದ ದೇವಿಶಾ ಶೆಟ್ಟಿ, ‘ಚೂರ್ ತುಳು ಕಲ್ಪಾವೊಡು ಆರೆಗ್ ನನ’ (ಇನ್ನು ಸ್ವಲ್ಪ ತುಳು ಕಲಿಸಬೇಕು ಅವರಿಗೆ) ಎಂದು ರಾಹುಲ್ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.

ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಹುಲ್ ಮತ್ತು ದೇವಿಶಾ ಅವರ ತುಳು ಪ್ರೇಮಕ್ಕೆ ಅಭಿಮಾನಿಗಳು ಮನಸೋತಿದ್ದಾರೆ..
ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 91 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಟೀಂ ಇಂಡಿಯಾ 2-1 ಅಂತರದಲ್ಲಿ ಟಿ20 ಸರಣಿ ಗೆದ್ದುಕೊಂಡಿತ್ತು. ಸೂರ್ಯ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 112 ರನ್ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು..




























