ಚಿಕ್ಕಮಗಳೂರು: ಕೊಲೆಗಾರರಿಗೆ ಕಾಫಿನಾಡ ಚಾರ್ಮಾಡಿ ಘಾಟಿ ಸೇಫ್ ಜೋನ್ ಆಗುತ್ತಿದ್ಯಾ ಎಂಬ ಅನುಮಾನ ಉಂಟಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ನೈಸರ್ಗಿಕ ಸೌಂದರ್ಯ ಕೊಲೆಗಾರರಿಗೆ ಮೃತದೇಹಗಳನ್ನು ಎಸೆಯಲು ಹೇಳಿ ಮಾಡಿಸಿದ ಜಾಗವಾಗಿದ್ಯಾ ಎಂಬ ಅನುಮಾನ ಬಲವಾಗಿ ಮೂಡಿದೆ.
ಬೆಂಗಳೂರಿನ ಮತ್ತಿಕೆರೆ ನಿವಾಸಿ ಗೋವಿಂದರಾಜು ಕುಟುಂಬದಲ್ಲಿಯೇ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದನು. ಇದನ್ನು ಸಹಿಸದ ಕುಟುಂಬದ ಅನಿಲ್, ಭರತ್ ಸೇರಿದಂತೆ ಮತ್ತಿಬ್ಬರು ಆರೋಪಿಗಳು ಕಳೆದ ಸೋಮವಾರ ಗೋವಿಂದರಾಜನನ್ನು ಮತ್ತಿಕೆರೆಯಿಂದ ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿ ಮೃತದೇಹವನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಸಾವಿರಾರು ಅಡಿ ಆಳದ ಪ್ರಪಾತದಲ್ಲಿ ಎಸೆದಿದ್ದರು.
ಪೋಷಕರು ಗೋವಿಂದರಾಜು ಕಾಣೆಯಾಗಿರುವ ಬಗ್ಗೆ ಯಶವಂತಪುರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ಆರಂಭಿಸಿದಾಗ ಕುಟುಂಬದವರಿಗೆ ಅನಿಲ್ ಮೇಲೆ ಅನುಮಾನವಿದ್ದರಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಭರತ್ ಮತ್ತಿತರ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದು, ಬುಧವಾರ ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಅವರ ತಂಡ ಮೃತದೇಹವನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇತ್ತೀಚಿಗೆ ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಎಲ್ಲೋ ಕೊಲೆ ಮಾಡಿ ಮೃತದೇಹಗಳನ್ನು ಎಸೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಫಿನಾಡ ಪ್ರಕೃತಿ ಸೌಂದರ್ಯವೇ ಕೆಲವರ ಪಾಲಿಗೆ ಮುಳ್ಳಾಗುತ್ತಿದ್ಯಾ ಎಂಬ ಅನುಮಾನ ಕೂಡ ಮೂಡಿದೆ. ಆಳವಾದ ಪ್ರಪಾತಗಳಲ್ಲಿ ಕೊಲೆಯಾದ ಶವಗಳು ಪತ್ತೆ ಆಗುತ್ತಿದ್ದು ಮಲೆನಾಡಿನ ಚಾರ್ಮಾಡಿ ಘಾಟಿ ಕೊಲೆಯಾದ ಶವಗಳಿಗೆ ಆಶ್ರಯವೇ ಎಂಬ ಪ್ರಶ್ನೆ ಉದ್ಭವವಾಗಿದೆ..