ಸಾಮಾನ್ಯವಾಗಿ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ಮುಗಿಸಿ ವಿದ್ಯಾರ್ಥಿಗಳು ತಮ್ಮ ತರಗತಿಗೆ ತೆರಳಿ ದೈನಂದಿನ ಪಾಠ ಪ್ರವಚನದಲ್ಲಿ ತೊಡಗುತ್ತಾರೆ. ತರಗತಿ ಆರಂಭದ ಬಳಿಕ ಶಾಲಾ ಹೊರ ಆವರಣ ಪ್ರಶಾಂತವಾಗಿರುತ್ತದೆ. ಆದರೆ ಇಂದು ಮಾತ್ರ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಶಾಲಾ ಆವರಣ ವಾರದ ಸಂತೆ ವ್ಯಾಪಾರದಂತೆ
ಕಾಣುತ್ತಿತ್ತು.
ಶಾಲೆಯಲ್ಲಿ ಸಂತೆಯ ಸಡಗರ, ಮಕ್ಕಳ ಮನದಲ್ಲಿ ಅದೇನೋ ಕುತೂಹಲ, ಮುಖದ ತುಂಬಾ ಸಂಭ್ರಮ ಮಕ್ಕಳ ನಡುವೆ ಗುಸು ಗುಸು ಮಾತು. ಇಲ್ಲಿ ಮಕ್ಕಳೇ ವ್ಯಾಪಾರಿಗಳು, ಮಕ್ಕಳೇ ಗ್ರಾಹಕರು ಇದರೊಂದಿಗೆ ಪೋಷಕರು ಕೂಡ ಗ್ರಾಹಕರಾಗಿ ಮಕ್ಕಳ ವ್ಯಾಪಾರಕ್ಕೆ ಇನ್ನಷ್ಟು ಮೆರುಗು ನೀಡಿದರು.
ಮೆಟ್ರಿಕ್ ಮೇಳ_ ಮಕ್ಕಳ ಸಂತೆ 2023 ಕಾರ್ಯಕ್ರಮವು ಶಾಲಾ ಗಣಿತ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ನಿತ್ಯ
ಜೀವನದಲ್ಲಿ ವ್ಯವಹಾರಿಕ ಜ್ಞಾನ, ಅಳತೆ, ಲಾಭ ನಷ್ಟದ ನೈಜ ಅನುಭವ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಮಕ್ಕಳ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಕೃಷ್ಣ ನಾಯ್ಕ ಉದ್ಘಾಟಿಸಿ ಶುಭ ಹಾರೈಸಿದರು.
ಈ ಮಕ್ಕಳ ಸಂತೆಯಲ್ಲಿ ಮಕ್ಕಳ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣಿನ ವ್ಯಾಪಾರ ಭರದಿಂದ ಸಾಗಿತ್ತು. ಐಸ್ ಕ್ರೀಮ್ ಗಾಗಿ ಪುಟಾಣಿ ಮಕ್ಕಳ ಸಾಲು ಸಾಗಿ ಬರುತ್ತಿತ್ತು. ಪಾನಿಪುರಿ, ಚರುಮುರಿ ,ಫ್ರೂಟ್ಸ್ ಸಲಾಡ್, ಚಾಕಲೇಟ್, ಸ್ವೀಟ್ ಕಾರ್ನ್ ಅಂಗಡಿಗಳಿಗೆ ಭರ್ಜರಿ ವ್ಯಾಪಾರ. ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳಿಗೂ ಒಳ್ಳೆಯ ಬೇಡಿಕೆ. ಮಡಿಕೆ ಸೋಡಾ ಮಕ್ಕಳ ಸಂತೆ ವ್ಯಾಪಾರದ ವಿಶೇಷ ಆಕರ್ಷಣೆಯಾಗಿತ್ತು. ಇದರೊಂದಿಗೆ ಫ್ಯಾನ್ಸಿ ಅಂಗಡಿಗಳು ವಿದ್ಯಾರ್ಥಿನಿಯರನ್ನು ಕೈಬೀಸಿ ಕರೆಯುತ್ತಿತ್ತು. ಮಕ್ಕಳು ವ್ಯಾಪಾರ ವಹಿವಾಟಿನ ನೈಜ ಅನುಭವ ಪಡೆದು, ತಮ್ಮ ಲಾಭ ನಷ್ಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ,ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ ,ಪೋಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಕೆ.ಕೆ ಮಾಸ್ಟರ್ ಸ್ವಾಗತಿಸಿ, ಶಿಕ್ಷಕಿ ಗಂಗಾವತಿ ರೈ ವಂದಿಸಿದರು. ಶಿಕ್ಷಕಿ ವನಿತ ಕಾರ್ಯಕ್ರಮ ನಿರೂಪಿಸಿದರು.