ಉಪ್ಪಿನಂಗಡಿ: ಪೊಲೀಸ್ ಠಾಣಾ ಉಪನಿರೀಕ್ಷಕರಾದ ರಾಜೇಶ್ ಕೆ.ವಿ. ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಷೇಧಿತ ಮಾದಕ ದ್ರವ್ಯ ಎಂ.ಡಿ.ಎಂ.ಎ ಯನ್ನು ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ ಗ್ರಾಮದ ರಾ.ಹೆ.75 ರಸ್ತೆಯ ಬೊಳ್ಳಾರಿನಲ್ಲಿ ನಡೆದಿದೆ.
ಕಡಬ ತಾಲೂಕು ಬೆಳಂದೂರು ದೇವಸ್ಯ ನಿವಾಸಿ ಮೊಹಮ್ಮದ್ ನಿಝರ್ (22) ಬಂಧಿತ ಆರೋಪಿ.
ಫೆ.7 ರಂದು ಮಧ್ಯಾಹ್ನ ವೇಳೆ ಮಾರುತಿ ಕಾರಿನಲ್ಲಿ ನಿಝರ್ ನಿಷೇಧಿತ ಮಾದಕ ದ್ರವ್ಯ ಎಂ.ಡಿ.ಎಂ.ಎ ಸಾಗಿಸುತ್ತಿದ್ದು, ಈ ಬಗ್ಗೆ ತಿಳಿದ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಗಳು ವಾಹನವನ್ನು ಪರಿಶೀಲನೆ ನಡೆಸಿದಾಗ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಎಂ.ಡಿ.ಎಂ.ಎ ಪತ್ತೆಯಾಗಿದೆ.
ಕಾರಿನ ಡ್ಯಾಶ್ ಬೋರ್ಡ್ ನಿಂದ ಎಂಡಿಎಂಎ ಇರುವ ಪ್ಲಾಸ್ಟಿಕ ಕವರ್ ಸಮೇತ ತೂಕ ಮಾಡಿದಾಗ 14.4 ಗ್ರಾಂ ತೂಕ, ಇದರ ಅಂದಾಜು ಮೌಲ್ಯ ರೂ 35,000/- ಆಗಬಹುದು. ಖಾಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ನ 09 ಕವರ್ ಗಳು, ಅಪಾದಿತನ ಐ ಫೋನ್ ಕಂಪೆನಿಯ ಮೊಬೈಲ್ ಸೆಟ್ -1 ಇದರ ಅಂದಾಜು ಮೌಲ್ಯ ರೂ: 20,000/- ಅಗಬಹುದು ಮತ್ತು HONOR ಕಂಪೆನಿಯ ಮೊಬೈಲ್ ಸೆಟ್ -1 ಇದರ ಅಂದಾಜು ಮೌಲ್ಯ ರೂ 5000/ ಹಾಗೂ ಮಾರುತಿ ಸುಜುಕಿ ಕಂಪೆನಿಯ ಅಲ್ಟೋ 800 ಸಿಲ್ವರ್ ಬಣ್ಣದ ಕಾರು ಇದರ ಅಂದಾಜು ಮೌಲ್ಯ ರೂ: 2,00,000/- ಆಪಾದಿತನ ಕಿಸೆಯಲ್ಲಿ ರೂ 500 ಮುಖ ಬೆಲೆಯ 04 ನೋಟುಗಳು ಇದ್ದು, ಒಟ್ಟು 2000/- ರೂ ನಗದು ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 11/2023 ಕಲಂ: 8 [ಸಿ] , 22[ಸಿ] , NDPS ACT 1985 ಮತ್ತು 34 ಐ.ಪಿಸಿ ಯಂತೆ ಪ್ರಕರಣ ದಾಖಲಾಗಿದೆ.