ನವದೆಹಲಿ: ಅಮಿತ್ ಶಾ ಆಗಮನಕ್ಕೂ ಮುನ್ನವೇ ಕರಾವಳಿ ಪಿಚ್ ರಿಪೋರ್ಟ್ ಹೈಕಮಾಂಡ್‌ಗೆ ತಲುಪಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಸಲ 19 ಸೀಟ್‌ಗಳಲ್ಲಿ 3 ಸೀಟ್ ಮಾತ್ರ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದ ಬಿಜೆಪಿ ಈಗಲೂ ಅದೇ ಮುನ್ನಡೆಗೆ ಕಸರತ್ತು ನಡೆಸಿದೆ. ಆದರೆ ಈ ಸಲ ಕೆಲ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದರೆ ಹೊಸ ಮುಖಗಳಿಗೆ ಆದ್ಯತೆ ಕೊಡಿ ಎಂಬ ವರದಿ ಕೂಡಾ ಹೈಕಮಾಂಡ್‌ಗೆ ರವಾನೆ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಸಲ ಹೊಸ ಮುಖಗಳಲ್ಲಿ ಕಮಲ ಅರಳಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಹಿಂದೂಗಳ ಹೆಚ್ಚು ಹತ್ಯೆ ಎಂಬ ಬಿಜೆಪಿ ಅಸ್ತ್ರ ಸಕ್ಸಸ್ ಆಗಿತ್ತು. 2018ರ ಚುನಾವಣೆ ಉದ್ದಕ್ಕೂ ಹಲವು ಪ್ರಕರಣಗಳನ್ನು ಬಿಜೆಪಿ ಪ್ರಸ್ತಾಪಿಸಿತ್ತು. ಆದರೆ ಈಗ ಬಿಜೆಪಿ ಸರ್ಕಾರವೇ ಇರುವುದರಿಂದ ಹಿಂದುತ್ವ ಅಸ್ತ್ರ ಪ್ರಯೋಗ ಎಷ್ಟರಮಟ್ಟಿಗೆ ಗೆಲುವು ತಂದುಕೊಡುತ್ತದೆ ಎಂಬ ಚರ್ಚೆಗಳು ಶುರುವಾಗಿದೆ.
ಫೆಬ್ರವರಿ 11ರಂದು ಅಮಿತ್ ಶಾ ಅವರ ಕರಾವಳಿ ಭಾಗದಲ್ಲಿ ಸಂಚಾರ, ಸಂಘಟನಾ ಸಭೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಕರಾವಳಿ ಜಿಲ್ಲೆಗಳ ಬಗ್ಗೆ ಬಿಜೆಪಿ ಹೆಚ್ಚು ಗಮನ ಕೊಡುತ್ತಿದೆ ಎನ್ನಲಾಗಿದೆ.
ಈಗಾಗಲೇ 3 ಜಿಲ್ಲೆಗಳ 19 ಕ್ಷೇತ್ರಗಳ ಬಗ್ಗೆ ಅಮಿತ್ ಶಾಗೆ ಪಿಚ್ ರಿಪೋರ್ಟ್ ತಲುಪಿದೆ ಎಂಬುದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಸ್ಥಾನಗಳಲ್ಲಿ 7 ಸ್ಥಾನವನ್ನು ಬಿಜೆಪಿ ಹಾಗೂ 1 ಸ್ಥಾನವನ್ನು ಕಾಂಗ್ರೆಸ್ ಗೆದ್ದಿತ್ತು. ಉಡುಪಿ ಜಿಲ್ಲೆಯಲ್ಲಿ 5ಕ್ಕೆ 5 ಸ್ಥಾನಗಳನ್ನೂ ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಉತ್ತರಕನ್ನಡ ಜಿಲ್ಲೆಯಲ್ಲಿ 6 ಸ್ಥಾನಗಳಲ್ಲಿ 4 ಬಿಜೆಪಿ, 2 ಕಾಂಗ್ರೆಸ್ ಗೆದ್ದುಕೊಂಡಿತ್ತು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದಿದ್ದ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಹೊಸ ಮುಖಗಳೇ ಇದ್ದವು. ಈಗಲೂ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್‌ನಿಂದ ನಾನಾ ತಂತ್ರಗಳು ನಡೆಯುತ್ತಿವೆ ಎನ್ನಲಾಗಿದೆ.
ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದರೆ ಹೊಸ ಮುಖ ಹುಡುಕಾಟಕ್ಕೂ ಹೈಕಮಾಂಡ್ ಸಂದೇಶ ರವಾನಿಸಿರುವ ಬಗ್ಗೆ ಬಿಜೆಪಿ ಪಾಳಯದಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದೆ. ಹಾಗಾದರೆ ಕರಾವಳಿಯಲ್ಲಿ ಬಿಜೆಪಿ 2018ರ ಹವಾ ಉಳಿಸಿಕೊಳ್ಳುತ್ತಾ..!!?? ಈ ಸಲ ಚಾಣಕ್ಯರ ಪ್ರಯೋಗ ಕುತೂಹಲ ಏನು ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ..