ಅಂಕಾರ: 28,000 ಜನರ ಸಾವು, 6,000 ಕಟ್ಟಡಗಳ ಕುಸಿತ, ಸಾವಿರಾರು ಜನರಿಗೆ ಗಾಯ.. ಹೀಗೆ ಮುಂದುವರಿಯುತ್ತದೆ ಟರ್ಕಿ ಭೂಕಂಪದಿಂದ ಉಂಟಾದ ಅನಾಹುತಗಳ ಪಟ್ಟಿ. ಕಳೆದ ಸೋಮವಾರ ಉಂಟಾದ 7.8 ತೀವ್ರತೆಯ ಭೂಕಂಪನದ ಬಳಿಕ ಟರ್ಕಿ ದೇಶ ಅಕ್ಷರಶಃ ನಲುಗಿ ಹೋಗಿದೆ. ಆದರೆ ಇಷ್ಟೆಲ್ಲಾ ದುಖಃದ ಸಂಗತಿಗಳ ನಡುವೆ ಆಶಾದಾಯಕ ಎನ್ನುವಂತಹ ಘಟನೆಯೊಂದು ನಡೆದಿದೆ.
ಭೂಕಂಪನದಲ್ಲಿ ಅವಶೇಷಗಳಡಿ ಸಿಲುಕಿದ್ದ ಎರಡು ತಿಂಗಳ ಮಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಲಾಗಿದೆ. ಘಟನೆ ನಡೆದು ಬರೋಬ್ಬರಿ 128 ಗಂಟೆಗಳ ಬಳಿಕ ಈ ಮಗುವನ್ನು ರಕ್ಷಣೆ ಮಾಡಲಾಗಿದೆ.
ಹೆಪ್ಪುಗಟ್ಟುವ ಹವಾಮಾನದ ಹೊರತಾಗಿಯೂ ಸಾವಿರಾರು ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳ ನಡುವೆ ಸಿಲುಕಿಕೊಂಡವರನ್ನು ಹುಡುಕುತ್ತಿದ್ದಾರೆ.
ಭೂಕಂಪದ ಐದು ದಿನಗಳ ನಂತರ ರಕ್ಷಿಸಲ್ಪಟ್ಟವರಲ್ಲಿ ಎರಡು ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಮತ್ತು 70 ವರ್ಷದ ಮಹಿಳೆ ಸೇರಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.