ಉಡುಪಿ: ಬಸ್ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಮೂಡಬೆಟ್ಟುವಿನಲ್ಲಿ ನಡೆದಿದೆ.
ಮೃತ ಯುವತಿಯನ್ನು ರೋಶನಿ ಡಿಸೋಜಾ ಎಂದು ಗುರುತಿಸಲಾಗಿದೆ.
ರೋಶನಿ ತನಗೆ ವಿವಾಹ ನಿಶ್ಚಯವಾಗಿದ್ದ ಯುವಕ ಜೊಯೇಲ್ ಎಂಬವರ ಜೊತೆ ಮಂಗಳೂರಿನಿಂದ ಕಲ್ಮಾಡಿ ಚರ್ಚಿಗೆ ಭೇಟಿ ನೀಡಿ ಮಂಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಉಡುಪಿ ಮಂಗಳೂರು ರಸ್ತೆಯಲ್ಲಿ ಮಂಗಳೂರು ಕಡೆಗೆ ರಸ್ತೆಯ ಬಲಬದಿಯಲ್ಲಿ ಡಿವೈಡರ್ ಪಕ್ಕದಲ್ಲಿ ಸ್ಕೂಟರ್ ಹೋಗುತ್ತಿದ್ದಾಗ ಉಡುಪಿ ಕಡೆಯಿಂದ ಬಂದ ಬಸ್ಸಿನ ಚಾಲಕ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು, ಏಕಾಏಕಿಯಾಗಿ ಬಸ್ಸನ್ನು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟರ್ ಹಿಂದೆ ಕುಳಿತಿದ್ದ ರೋಶನಿಯವರ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬಸ್ ರೋಶನಿಯ ಕಾಲಿಗೆ ಡಿಕ್ಕಿ ಹೊಡೆದ ಕಾರಣ ನೋವಿನಿಂದ ಅತ್ತಿತ್ತ ವಾಲಾಡಿದ್ದು, ಸ್ಕೂಟರ್ ನಿಯಂತ್ರಣ ತಪ್ಪಿ ಮುಂದೆ ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ನಡೆಯುತ್ತಿದ್ದ ಕಾರಣ ರಸ್ತೆಯ ಬಲಬದಿಗೆ ಅಡ್ಡವಿಟ್ಟಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ರೋಶನಿ ತಲೆಗೆ ಪೆಟ್ಟಾಗಿದ್ದು, ಬಾಯಲ್ಲಿ ರಕ್ತ ಬರುತ್ತಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರೋಶನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸ್ಕೂಟರ್ ಸವಾರ ಪ್ರಥಮ ಚಿಕಿತ್ಸೆ ಪಡೆದು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2023 ಕಲಂ: 279, 337, 304(ಎ) ಐಪಿಸಿ ಮತ್ತು 134 (ಎ) & (ಬಿ) ಐ.ಎಮ್.ವಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ..