ಪುತ್ತೂರು: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ 50 ಅಡಿ ಆಳದ ತೋಟಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಟ್ಟಂಪಾಡಿ ಕಕ್ಕೂರು ನಿವಾಸಿ ಶಶಿಕುಮಾರ್ (28) ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಫೆ.14 ರಂದು ರಾತ್ರಿ ಶಶಿಕುಮಾರ್ ಮತ್ತು ಬೆಟ್ಟಂಪಾಡಿಯ ದಿಲೀಪ್ ಎಂಬವರು ದರ್ಬೆಯಲ್ಲಿದ್ದಾಗ ಪರಿಚಯದ ನಿಡ್ಪಳ್ಳಿಯ ಮುರಳಿಕೃಷ್ಣ ಎಂಬವರು ಕಾರನ್ನು ಚಲಾಯಿಸಿಕೊಂಡು ಪುತ್ತೂರಿನಿಂದ ದರ್ಬೆಗೆ ಬಂದು ಶಶಿಕುಮಾರ್ ಬಳಿ ನಿಲ್ಲಿಸಿ, ಶಶಿಕುಮಾರ್ ಮತ್ತು ಬೆಟ್ಟಂಪಾಡಿಯ ದಿಲೀಪ್ ರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡಿದ್ದು, ಆ ವೇಳೆ ಸದ್ರಿ ಕಾರಿನಲ್ಲಿ ದೂಮಡ್ಕದ ನವನೀತರವರು ಕುಳಿತುಕೊಂಡಿದ್ದು, ಮುರಳಿಕೃಷ್ಣರ ವರು ಕಾರನ್ನು ಚಲಾಯಿಸಿಕೊಂಡು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಳಕ್ಕ ಎಂಬಲ್ಲಿಗೆ ತಲುಪಿದಾಗ ಮುರಳಿಕೃಷ್ಣ ರವರು ಸದ್ರಿ ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ 2 ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಸದ್ರಿ ಕಾರು ರಸ್ತೆಯ ಎಡ ಬದಿಯ ಆಳಕ್ಕೆ ಬಿದ್ದು, ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಶಶಿಕುಮಾರ್ ರವರ 1 ಹಲ್ಲು ಮುರಿದಿದ್ದು,ತುಟಿ, ಬಲಕಣ್ಣಿನ ಮೇಲ್ಭಾಗ,ಬಲಕೋಲು ಕಾಲಿಗೆ ಗಾಯವಾಗಿದ್ದು, ದಿಲೀಪ್ ರವರ ಮುಖ,ಬಲ ಕೋಲು ಕಾಲಿನಲ್ಲಿ ಗಾಯ ಮತ್ತು ಗುದ್ದಿದ ರೀತಿಯ ಗಾಯವಾಗಿರುತ್ತದೆ. ನವನೀತ್ ರವರಿಗೆ ಕುತ್ತಿಗೆಯ ಬಳಿ ಗುದ್ದಿದ ರೀತಿಯ ನೋವುಂಟಾಗಿರುತ್ತದೆ.
ಕಾರಿನ ಚಾಲಕರಾದ ಮುರಳಿಕೃಷ್ಣ ರವರಿಗೆ ತಲೆ ಮತ್ತು ಇತರ ಕಡೆಗಳಲ್ಲಿ ತೀವ್ರ ಗಾಯವಾಗಿದ್ದು, ಅಪಘಾತವನ್ನು ನೋಡಿ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ದಿಲೀಪ್,ನವನೀತ್ ಮತ್ತು ಶಶಿಕುಮಾರ್ ರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತದಲ್ಲಿ ಗಾಯಗೊಂಡ ಮುರಳಿಕೃಷ್ಣ ರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮುರಳಿಕೃಷ್ಣ ರವರು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯಾಧಿಕಾರಿಯವರು ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 14-2023 ಕಲಂ: 279,337,338,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.