ಮಂಗಳೂರು: ಅಡಿಕೆಯ ಆಮದು ಪ್ರಮಾಣದ ಮೇಲೆ ಇನ್ನಷ್ಟು ನಿಯಂತ್ರಣ ತರುವ ಉದ್ದೇಶದಿಂದ ಕೇಂದ್ರ ಸರಕಾರ ಕನಿಷ್ಠ ಆಮದು ದರವನ್ನು ಕಿಲೋಗೆ 351 ರೂ.ಗೆ ಏರಿಸಿದೆ.
ವಿದೇಶದಿಂದ ಭಾರತಕ್ಕೆ ಬರುವ ಅಡಿಕೆ ಮೇಲೆ ಆಮದು ಕನಿಷ್ಠ ದರವನ್ನು ಉತ್ಪಾದನ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಕೇಂದ್ರದ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪೀಯೂಷ್ ಗೋಯಲ್, ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದವು.
ಈ ಪ್ರಯತ್ನದ ಫಲವಾಗಿ ಕೇಂದ್ರ ಸರಕಾರ ಅಡಿಕೆ ಆಮದು ಮೇಲಿನ ಕನಿಷ್ಠ ದರ ಕೆಜಿಗೆ 251 ರೂ. ಇದ್ದುದನ್ನು 100 ರೂ.ನಷ್ಟು ಏರಿಸಿದ್ದು, ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಕ್ಯಾಂಪ್ಕೋ ಕೃತಜ್ಞತೆ ಆಮದು ಬೆಲೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಶೋಭಾ ಕರಂದ್ಲಾಜೆ, ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಕರಾವಳಿಯ ಸಂಸದರು ಮತ್ತು ಶಾಸಕರಿಗೆ ಕ್ಯಾಂಪ್ಕೋ ಕೃತಜ್ಞತೆ ಸಲ್ಲಿಸುತ್ತದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ..