ಕಡಬ: ಗ್ರಾಮ ಪಂಚಾಯತ್ ಕಛೇರಿ ಒಳಗಡೆ ಬಂದು ವೀಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಿರುವ ಕುರಿತು ಪಿಡಿಓ ದೂರು ನೀಡಿದ ಹಿನ್ನೆಲೆ ಪೊಲೀಸರು ಯೂಟ್ಯೂಬ್ ಚಾನೆಲ್ ನವರನ್ನು ಠಾಣೆಗೆ ಕರೆಸಿ ವೀಡಿಯೋ ದೃಶ್ಯವನ್ನು ಡಿಲೀಟ್ ಮಾಡಿದ ಘಟನೆ ಕಡಬದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ ಕಛೇರಿಯೊಳಗೆ ಆಗಮಿಸಿದ ಕಡಬದ ಸಂತೋಷ್ ರೈ ಎಂಬವರು ಪಿಡಿಓ ಸುಜಾತ ಕೆ. ರವರು ಸಾರ್ವಜನಿಕ ಕರ್ತವ್ಯದಲ್ಲಿದ್ದ ವೀಡಿಯೋವನ್ನು ಚಿತ್ರೀಕರಣ ಮಾಡಿದ್ದಲ್ಲದೆ ತಮ್ಮ ಯೂಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿ ಪಿಡಿಓ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪಿಡಿಓ ಸುಜಾತ ಅವರು ನೀಡಿದ್ದ ದೂರಿನಂತೆ ಕಡಬದ ಖಾಸಗಿ ಯೂಟ್ಯೂಬ್ ಚಾನೆಲ್ ನ ಸಂತೋಷ್ ರೈ ಎಂಬವರನ್ನು ಠಾಣೆಗೆ ಕರೆಸಿದ ಎಸ್.ಐ. ಹರೀಶ್ ಆರ್. ಮತ್ತು ಎ.ಎಸ್.ಐ. ಸುರೇಶ್ ರವರು ಸಂತೋಷ್ ರೈಯವರನ್ನು ವಿಚಾರಿಸಿ ಅವರಿಗೆ ಎಚ್ಚರಿಕೆ ನೀಡಿದರಲ್ಲದೆ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದ್ದ ವೀಡಿಯೋ ತುಣಕನ್ನು ಡಿಲೀಟ್ ಮಾಡಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.