ವಿಧಾನ ಪರಿಷತ್ ಅಧಿವೇಶನದಲ್ಲಿ ತುಳು ಭಾಷೆಯನ್ನು ಅಧಿಕೃತವಾಗಿಸಬೇಕೆನ್ನುವ ಇಂಗಿತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರು ವ್ಯಕ್ತಪಡಿಸಿದ್ದು, ಈ ವಿಚಾರಕ್ಕೆ ಸಚಿವ ಮಾಧುಸ್ವಾಮಿ ಅಪಸ್ವರ ವ್ಯಕ್ತಪಡಿಸಿದ್ದು, ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಮಾಧುಸ್ವಾಮಿ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ಶಾಸಕ ಖಾದರ್ ಅವರು ತುಳು ಭಾಷೆ ನಮ್ಮ ದೈವ-ದೇವರುಗಳು ಮಾತನಾಡುವ ಭಾಷೆ., ಅದಕ್ಕೆ ಅದರದ್ದೇ ಆದಂತಹ ಇತಿಹಾಸವಿದೆ. ಇದರಿಂದಾಗಿ ತುಳುಭಾಷೆಯನ್ನು ರಾಜ್ಯದಲ್ಲಿ ಅಧಿಕೃತಗೊಳಿಸಬೇಕು ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ರವರು ನಿಮ್ಮ ಊರಲ್ಲಿ ದೇವರು ಮಾತನಾಡುತ್ತಾರ ಎಂದು ವ್ಯಂಗ್ಯವಾಡುವ ರೀತಿಯಲ್ಲಿ ಮಾತನಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ‘ಖಾದರ್ ಅವರು ತುಳುವನ್ನು ದೈವಭಾಷೆ ಅಂದಾಗ ಅದಕ್ಕೆ ಕೊಂಕು ಮಾತನಾಡಿದ ಮಾಧುಸ್ವಾಮಿ ಅವರನ್ನ ತರಾಟೆಗೆ ತೆಗೆದುಕೊಳ್ಳದ ನಿಮ್ಮ ಅಭಿಮಾನ ಸತ್ತು ಹೋಗಿದೆಯಾ..!!?, ಮಾಧುಸ್ವಾಮಿ ಬಿಜೆಪಿಗರೇ ಆಗಿರಲಿ ತನ್ನ ಮಾತೃಭಾಷೆಗೆ ಅವಮಾನ ಆದಾಗ ವಿರೋಧಿಸದ ನೀವುಗಳು ಆ ವ್ಯಕ್ತಿಯಿಂದ ಬಹಿರಂಗ ಕ್ಷಮೆ ಕೇಳಿಸದಿದ್ದರೆ ನೀವು ನಮ್ಮ ತುಳುನಾಡಿನ ಪ್ರತಿನಿಧಿಗಳೇ ಅಲ್ಲ. ಕನ್ನಡ ರಾಜ್ಯಭಾಷೆ ನಮಗೂ ಗೌರವ ಇದೆ ಹಾಗಂತಾ ನಮ್ಮ ಮಾತೃಭಾಷೆಯ ಬಗ್ಗೆ ಕೊಂಕು ನುಡಿಯಲು ಯಾವೊಬ್ಬನಿಗೂ ಅಧಿಕಾರವಿಲ್ಲ’ ಎಂದೆಲ್ಲಾ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..
