ವಿಟ್ಲ: ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತದ ಬಗ್ಗೆ ಮತ ಪ್ರವಚನ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ ಹಿನ್ನೆಲೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಗಮಿಸಿ ಹಿಂದೂ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ ಘಟನೆ ಅಡ್ಯನಡ್ಕದಲ್ಲಿ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಹಾಗೂ ಹಿಂದೂ ಮುಖಂಡರು ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಷನ್(NIYA) ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಯನಡ್ಕ ಜನತಾ ಹೈಸ್ಕೂಲ್ ನ ವಿದ್ಯಾರ್ಥಿಗಳನ್ನು ಅದರಲ್ಲೂ ಹಿಂದೂ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತೆರಳುವಂತೆ ಶಾಲಾ ಪ್ರಾಂಶುಪಾಲರಾದ ರುದ್ರಪ್ಪ ನಾಯ್ಕ್ ತಿಳಿಸಿದ್ದಾಗಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದು, ಈ ಹಿನ್ನೆಲೆ ಮಕ್ಕಳ ಹಾದಿ ತಪ್ಪಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಹಾಗೂ ಹಿಂದೂ ಮುಖಂಡರು ಪೊಲೀಸ್ ಅಧಿಕಾರಿಗಳ ಬಳಿ ಆಗ್ರಹಿಸಿದ್ದಾರೆ.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್, ವಿಟ್ಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ದಯಾನಂದ ಉಜಿರೆಮಾರ್, ಶ್ರೀಕೃಷ್ಣ ವಿಟ್ಲ, ಅಕ್ಷಯ್ ರಜಪೂತ್, ಗಣೇಶ್ ಅಡ್ಯನಡ್ಕ, ಕೇಪು ಗ್ರಾಮಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಮಾಜಿ ಅಧ್ಯಕ್ಷ ತಾರಾನಾಥ್ ಆಳ್ವ, ಪುರುಷೋತ್ತಮ ಕಲ್ಲಂಗಳ, ಉಪಾಧ್ಯಕ್ಷ ರಾಘವ ಮಣಿಯಾಣಿ ,ಜಾಗರಣ ಪ್ರಮುಖ್ ಹರ್ಷ ರೈ ಕಲ್ಲಂಗಳ.. ನವೀನ್ ಕೋಲ್ಪೆ ಹಾಗೂ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.
ಠಾಣೆಯ ಮುಂಭಾಗ ನೂರಾರು ಮಂದಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, ಸ್ಥಳಕ್ಕೆ ಶಾಸಕರು ಆಗಮಿಸದ ಹಿನ್ನೆಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ವರದಿಯಾಗಿದೆ.
ಹಿಂದೂ ಕಾರ್ಯಕರ್ತರು ಶಾಸಕ ಸಂಜೀವ ಮಠಂದೂರು ರವರಿಗೆ ಕರೆ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಿಲ್ಲಾಧಿಕಾರಿಯವರ ಬಳಿ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಘಪರಿವಾರದ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಠಾಣೆ ಮುಂಭಾಗ ಧರಣಿ ಕುಳಿತು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಮತಾಂತರ ಕಾಯ್ದೆ ಹಾಕುವ ಭರವಸೆ ನೀಡಿದ್ದು, ಬಳಿಕ ಕಾರ್ಯಕರ್ತರು ಠಾಣೆಯಿಂದ ತೆರಳಿದರು.