ಬಂಟ್ವಾಳ: ತಾಲೂಕು ಕಚೇರಿ ಅವ್ಯವಸ್ಥೆಗಳ ಆಗರವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸುಮಾರು ಐದು ವರುಷಗಳ ಹಿಂದೆ ನವೀಕರಣಗೊಂಡು ಉದ್ಘಾಟನೆಗೊಂಡ ಬಿ.ಸಿ.ರೋಡ್ ನ ಹೃದಯ ಭಾಗದಲ್ಲಿರುವ ಬಂಟ್ವಾಳ ತಾಲೂಕು ಕಚೇರಿಯು ಅವ್ಯವಸ್ಥೆಗಳಿಂದ ಕೂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗಿದೆ.

ತಾಲೂಕು ಕಚೇರಿಯ ಶೌಚಾಲಯಗಳು ಬಹಳ ಕೊಳಕಾಗಿದ್ದು, ಶೌಚಾಲಯದ ಕಿಟಕಿಯ ಬದಿಗಳಲ್ಲಿ ಬೀಡ ಹಾಗೂ ಪಾನ್ ಪರಾಗ್ ತಿಂದು ಉಗುಳಲಾಗಿದೆ. ಕೈ ತೊಳೆಯುವ ಬೇಸಿನ್ ಗಳ ಕೆಳಗೆ ನೀರು ನಿಂತು ಪಾಚಿ ಕಟ್ಟಿದಂತಾಗಿದೆ. ಮುರಿದ ಚೇರ್ ಅನ್ನು ಕಿಟಕಿಯ ಬದಿಯೇ ತಂದು ಹಾಕಲಾಗಿದೆ.

ಕಚೇರಿಯ ಕೆಲ ಅಂತಸ್ತಿನ ಮೇಲ್ಛಾವಣಿಯ ಮೇಲೆ ಚಾಕಲೇಟ್ ಸಿಪ್ಪೆ ಹಾಗೂ ಇನ್ನಿತರ ಕಸಕಡ್ಡಿಗಳು ರಾಶಿ ಬಿದ್ದಿವೆ.

ಪ್ರತಿ ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಸ್ಥಳದಲ್ಲಿ ಈ ರೀತಿಯ ಅವ್ಯವಸ್ಥೆ ತುಂಬಿರುವುದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ. ಸರ್ಕಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಈ ರೀತಿಯಾಗಿ ಕೊಳಕು ಸೃಷ್ಟಿಸುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


