ಪುತ್ತೂರು : ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿರುವುದು ನಿಜ. ಈ ಸಮಸ್ಯೆ ನೀಗಿಸಲು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೆಚ್ಚುವರಿ ಪ್ರಮಾಣದಲ್ಲಿ ಆಕ್ಸಿಜನ್ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ರಾಜ್ಯ ಅರಣ್ಯ ಖಾತೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಪುತ್ತೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಜಿಂದಾಲ್ ಸೇರಿದಂತೆ ನಾನಾ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದ್ದು, ಆಕ್ಸಿಜನ್ ನೀಡುವಂತೆ ತಿಳಿಸಲಾಗಿದೆ. ಸಚಿವ ಜಗದೀಶ್ ಶೆಟ್ಟರ್ ಈ ಬಗ್ಗೆ ಕಂಪನಿಗಳ ಜತೆ ಮಾತುಕತೆ ನಡೆಸಿದ್ದಾರೆ ಎಂದರು . ಆಕ್ಸಿಜನ್ ಬೆಡ್‌ಗಳು ಮತ್ತು ವೆಂಟಿಲೇಟರ್ ಬೆಡ್‌ಗಳಿಗೆ ಮೀರಿ ಕೊರೊನಾ ರೋಗಿಗಳು ದಾಖಲಾಗುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಸರಕಾರ ತನ್ನ ಇತಿಮಿತಿಯೊಳಗೆ ಏನೇನು ಮಾಡಬಹುದೋ ಅದನ್ನೆಲ್ಲ ಮಾಡುತ್ತಿದೆ ಎಂದು ಸಚಿವರು ನುಡಿದರು.
ಸರಕಾರ ತನ್ನ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪದೇ ಪದೇ ಬದಲಾಯಿಸುವ ಮೂಲಕ ಜನರನ್ನು ಗೊಂದಲ ಮತ್ತು ಆತಂಕಕ್ಕೆ ತಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಕೂಡ ನಮ್ಮನ್ನು ಗೊಂದಲಕ್ಕೆ ದೂಡುತ್ತಿದೆ. ದಿನ ದಿನಕ್ಕೆ ಪ್ರಮಾಣ ಹೆಚ್ಚುತ್ತಿರುವ ಕಾರಣ ಸರಕಾರ ಅನಿವಾರ್ಯವಾಗಿ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾಗಿ ಬಂದಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸರಕಾರದ ಜತೆ ಕೈಜೋಡಿಸಬೇಕು. ಇದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯ. ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯ ಎಂದು ಸಚಿವರು ನುಡಿದರು. ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.