ಮುಂಬೈ: ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಗೆ ಇಂದು ಮುಂಬೈನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ.
ಮಹಿಳಾ ಐಪಿಎಲ್ ಎಂದೇ ಕರೆಸಿಕೊಳ್ಳುತ್ತಿರುವ ಟೂರ್ನಿಯ ರೋಚಕ ಕಾದಾಟಕ್ಕೆ ಈ ಬಾರಿ ಮುಂಬೈನ ಬ್ರೆಬೋರ್ನ್ ಹಾಗೂ ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.
23 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, ಫೈನಲ್ ಸೇರಿ ಒಟ್ಟು 22 ಪಂದ್ಯಗಳು ನಡೆಯಲಿವೆ.
ಮಾರ್ಚ್ 26ಕ್ಕೆ ಫೈನಲ್ ನಿಗದಿಯಾಗಿದೆ. ಇಂದು ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಟೂರ್ನಿಯಲ್ಲಿ 4 ಡಬಲ್ ಹೆಡರ್(ದಿನಕ್ಕೆ 2 ಪಂದ್ಯ)ಗಳಿದ್ದು, ಆ ದಿನ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಒಂದೇ ಪಂದ್ಯವಿರುವ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
ಟೂರ್ನಿಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದ್ದು, ಶನಿವಾರ ಸಂಜೆ 5.30ರಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಾಲಿವುಡ್ ತಾರೆಗಳಾದ ಕಿಯಾರ ಅಡ್ವಾನಿ, ಕೃತಿ ಸನೋನ್, ಗಾಯಕ ಎಪಿ ಧಿಲ್ಲೋನ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ. ಸುಮಾರು ಒಂದೂವರೆ ಗಂಟೆ ಕಾಲ ಸಮಾರಂಭ ನಡೆಯಲಿದೆ.
ಟೂರ್ನಿ ಮಾದರಿ ಹೇಗೆ..!!??
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದ್ದು, ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ.
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳು ಮತ್ತು ನಾಯಕಿಯರು
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಸ್ಮೃತಿ ಮಂಧನಾ
ಮುಂಬೈ ಇಂಡಿಯನ್ಸ್ – ಹರ್ಮನ್‌ಪ್ರೀತ್ ಕೌರ್
ಡೆಲ್ಲಿ ಕ್ಯಾಪಿಟಲ್ಸ್ – ಮೆಗ್ ಲ್ಯಾನಿಂಗ್
ಯುಪಿ ವಾರಿಯರ್ಸ್- ಎಲಿಸಾ ಹೀಲಿ
ಗುಜರಾತ್ ಜೈಂಟ್ಸ್ – ಬೆಥ್ ಮೂನಿ