ಪುತ್ತೂರು : ಸರಕಾರ ಜಾರಿಗೆ ತಂದ ಕರ್ಪ್ಯೂ ಸಂದರ್ಭದಲ್ಲಿ ಟೈಲರ್ ವೃತ್ತಿಯವರಿಗೆ ಕೊರೋನಾ ನಿಯಮಾವಳಿ ಪಾಲಿಸಿಕೊಂಡು ಕೆಲಸ ನಿರ್ವಹಿಸಲು ಪುತ್ತೂರು ವಿಭಾಗಾಧಿಕಾರಿ ಯತೀಶ್ ಉಳ್ಳಾಲ್‌ರವರು ಅನುಮತಿ ನೀಡಿದ್ದಾರೆ.
ಪುತ್ತೂರು ಟೈಲರ್ ಅಸೋಸಿಯೇಶನ್‌ನಿಂದ ಟೈಲರ್ ವೃತ್ತಿದಾರರು ಕೆಲಸ ನಿರ್ವಹಿಸಲು ಅನುಕೂಲ ಕಲ್ಪಿಸಿಕೊಡುವಂತೆ ಪುತ್ತೂರು ಉಪವಿಭಾಗಾಧಿಕಾರಿಯವರಿಗೆ ಮನವಿ ನೀಡಲಾಗಿತ್ತು. ಮದುವೆ ಸಮಾರಂಭ, ರಂಝಾನ್ ಹಬ್ಬಗಳಿಗೆ ಸಂಬಂಧಪಟ್ಟಂತೆ ಹೊಲಿಗೆ ಕೆಲಸಗಳನ್ನು ನಿಗದಿತ ಸಮಯಕ್ಕೆ ಮಾಡಿಕೊಡಲು ಅನುವು ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿಯವರು ಕೊರೊನಾ ನಿಯಮಾವಳಿ ಪಾಲಿಸಿಕೊಂಡು ಒಂದು ಅಂಗಡಿಯಲ್ಲಿ ಇಬ್ಬರು ಕೆಲಸ ನಿರ್ವಹಿಸುವುದು, ಗುಂಪು ಸೇರದೆ ಮಾಸ್ಕ್ ಬಳಸಿಕೊಂಡು, ಮುಂಜಾಗ್ರತಾ ಕ್ರಮ ಕೈಗೊಂಡು ಎ.೨೬ರಿಂದ ಕೆಲಸ ಮಾಡಲು ಅನುಮತಿ ನೀಡಿದ್ದಾರೆ.
ಮನವಿ ನೀಡಿದ ಸಂದರ್ಭದಲ್ಲಿ ಪುತ್ತೂರು ತಾಲೂಕು ಟೈಲರ್ ಅಸೋಸಿಯೇಶನ್ ಅಧ್ಯಕ್ಷ ಜಯರಾಮ ಪೂಜಾರಿ ಬಿ.ಎನ್., ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಶೋಧಕ ರಘುನಾಥ್ ಬಿ. ಪುತ್ತೂರು, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಉಪಸ್ಥಿತರಿದ್ದರು.