ಕನ್ನಡದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಮೊಳಗಿಸಿದ ‘ಕಾಂತಾರ’ ನಟ-ನಿರ್ದೇಶಕ ರಿಷಭ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಕನ್ನಡದ ದನಿಯನ್ನು ಹೊಮ್ಮಿಸಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ರಿಷಭ್, ಭಾರತದ ನಾಗರಿಕ ಸಮಾಜ ತನ್ನ ಪರಿಸರ ವನ್ನು ರಕ್ಷಿಸಲು ಪಣ ತೊಡುತ್ತದೆ. ಇಂಥ ಪ್ರಜ್ಞೆಗೆ ಸಿನೆಮಾ ಮಾಧ್ಯಮವೂ ನೆರವಾಗುತ್ತದೆ ಎಂದು ಹೇಳುತ್ತ ನಿಸರ್ಗ ಮಯ ಚಿತ್ರ ಕಾಂತಾರದ ಮಹತ್ವವನ್ನು ವಿವರಿಸಿದರು.
ಭಾರತದ ಹಲವಾರು ಸಿನೆಮಾಗಳು ವಾಸ್ತವಿಕ ಮತ್ತು ಕಾಲ್ಪನಿಕ ಕಥೆಗಳ ಮೂಲಕ ಪರಿಸರದ ಮಹತ್ವವನ್ನು ಜಗತ್ತಿಗೆ ವಿವರಿಸುವ ಕೆಲಸ ಮಾಡಿವೆ. ಜತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿವೆ ಎನ್ನಲು ಹೆಮ್ಮೆಯಾಗುತ್ತದೆ ಎಂದರು.
ವಿಶ್ವಸಂಸ್ಥೆಯಲ್ಲಿ ಕನ್ನಡ ನುಡಿಯನ್ನು ಹೊಮ್ಮಿಸಿದ ‘ಕಾಂತಾರ’ ಸಿನೆಮಾದ ನಟ-ನಿರ್ದೇಶಕ ರಿಷಭ್ ಶೆಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಹಬ್ಬಾಸ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ಹೆಮ್ಮೆಯ ಕನ್ನಡಿಗನೊಬ್ಬ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲಿ ಮಾತನಾಡಿರುವುದು ನಿಜಕ್ಕೂ ಅದ್ಭುತ. ಅಭಿನಂದನೆಗಳು. ರಿಷಬ್, ನಿಮ್ಮ ಕನ್ನಡ ಪ್ರೇಮಕ್ಕೆ ಹೃದಯಾಂತರಾಳ ದಿಂದ ಗೌರವ ಅರ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮಾತ್ರವಲ್ಲದೆ, ವಿಶ್ವಸಂಸ್ಥೆಯಲ್ಲಿ ಕನ್ನಡ ಧ್ವನಿಯನ್ನು ಹೊಮ್ಮಿಸಿರುವ ರಿಷಬ್ಗ ಜಗತ್ತಿನ ಮೂಲೆಮೂಲೆಗಳಿಂದ ಲಕ್ಷಾಂತರ ಕನ್ನಡಿಗರಿಂದ ಅಭಿನಂದನೆ, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.