ಮಂಗಳೂರು: ವಿಟ್ಲ ಮೂಲದ ನವ ವಿವಾಹಿತ ಯುವಕನೋರ್ವ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಸಂಭವಿಸಿದೆ.
ಮೃತರನ್ನು ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಎಂದು ಗುರುತಿಸಲಾಗಿದೆ.
ಇವರು 10 ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದರು.
ನವವಿವಾಹಿತರಾಗಿದ್ದ ಹರೀಶ್ ಅವರು ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿಯಾಗಿದ್ದ ಯುವತಿಯನ್ನು ವಿವಾಹವಾಗಿದ್ದರು. ಇದೀಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ.
ಮಾ.12 ರಂದು ಹರೀಶ್ ತನ್ನ ತಾಯಿಯ ಅಕ್ಕನ ಮಗನಾಗಿರುವ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿ ತನ್ನ ಬ್ಯಾಗಿನಲ್ಲಿ ಭಸ್ಮ, ತಗಡು ದೊರೆತಿದ್ದು, ವಾಮಾಚಾರ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಹೋದರ ರಮೇಶ್ ಮಾ.19 ಭಾನುವಾರ ಮನೆಗೆ ಬಂದು ಮಾತನಾಡುವ ಎಂದು ತಿಳಿಸಿರುವಂತೆ ಹರೀಶ್ ಅವರು ಮಾತುಕತೆಗೆಂದು ಬಂದಿದ್ದರು. ಆದರೆ ಬರುವಾಗಲೇ ಕೈಯಲ್ಲಿ ಪೆಟ್ರೋಲ್ ಅನ್ನು ಕ್ಯಾನಿನಲ್ಲಿ ಹಿಡಿದುಕೊಂಡು ಬಂದಿದ್ದಾರೆ.
ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಮೈಪೂರ್ತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಮಂದಿ ಗಾಬರಿಗೊಂಡು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಣಾಜೆ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಹರೀಶ್ ಸಾವನ್ನಪ್ಪಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.