ಮಂಗಳೂರು: ಜನತಾ ಕರ್ಫ್ಯೂ ಜನಸಾಮಾನ್ಯರ ಬದುಕಿಗೆ ಕಂಟಕವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ದುಡಿಮೆ ಕಳೆದುಕೊಂಡಿರುವ ಶ್ರಮಜೀವಿಗಳ ಕುಟುಂಬಕ್ಕೆ ಸರ್ಕಾರದ ವತಿಯಿಂದ ದೈನಂದಿನ ಅವಶ್ಯಕ ಸಾಮಗ್ರಿಗಳ ಕಿಟ್ ವಿತರಣೆ ಮಾಡಬೇಕು. ಅಲ್ಲದೇ ಬಡ ಕುಟುಂಬಗಳಿಗೆ, ಕಾರ್ಮಿಕರಿಗೆ ಕನಿಷ್ಟ ಅಕ್ಕಿ, ಬೆಲ್ಲ, ಸಕ್ಕರೆ, ಚಹ, ಧಾನ್ಯ, ಅಡುಗೆ ಎಣ್ಣೆ ಇತ್ಯಾದಿಗಳನ್ನು ವಿತರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ದುಡಿಮೆ ಇಲ್ಲದ ಕುಟುಂಬಗಳಿಗೆ ಸಹಾಯ ನೀಡುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ಲಾಕ್‌ಡೌನ್‌ನಿಂದ ದಿನಗೂಲಿ ಕಾರ್ಮಿಕರಿಗೆ ತೊಂದರೆಯಾಗಬಾರದು. ಪ್ರಾಯೋಗಿಕವಾಗಿ ದುಡಿಯಲು ಅವಕಾಶ ಮಾಡಿಕೊಡಬೇಕು. ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು ದುಡಿಯಲು ಆದಷ್ಟು ಅವಕಾಶ ದೊರೆಯಬೇಕು ಎಂದು ಹೇಳಿದರು