ಬೆಂಗಳೂರು ಎಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿಯವರ ಲಸಿಕಾ ಉತ್ಸವಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದ್ದು, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯಕ್ರಮಕ್ಕೆ ಲಸಿಕೆಗಳ ಬರ ಎದುರಾಗಿದೆ. ಕರ್ನಾಟಕದಲ್ಲಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಅದರ ಅನ್ವಯ 3- 3.5 ಕೋಟಿ ಜನ ಕರ್ನಾಟಕದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. 1 ಕೋಟಿ ಕೋವಿ ಶೀಲ್ಡ್ ಗೆ 400 ಕೋಟಿ ಕೊಟ್ಟು ಆರ್ಡರ್ ಮಾಡಿದ್ದೇವೆ. ಕಂಪೆನಿಗಳು ಯಾವಾಗ ಕೊಡುತ್ತೆ ಅಂತ ಇದುವರೆಗೆ ನಮಗೆ ಮಾಹಿತಿ ಬಂದಿಲ್ಲ. ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು ಅಂತ ಮನವಿ ಮಾಡುತ್ತೇನೆ. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ. ಕಂಪೆನಿಯವರು ಅಧಿಕೃತ ಮಾಹಿತಿ ಹಂಚಿಕೊಂಡ ನಂತರ ಲಸಿಕೆ ಯಾವ ವಾರದಿಂದ ಸಿಗುತ್ತೆ ಅಂತ ಹೇಳಬಹುದು ಎಂದರು