ಮಂಗಳೂರು: ಉಳ್ಳಾಲ ಪೊಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿರುವ ನಿಸರ್ಗ ಬಾರ್ ಅಂಡ್ ರೆಸ್ಟೋರೆಂಟ್ ಗೆ ದಾಳಿ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದು 50 ಬಾಕ್ಸ್ ನಲ್ಲಿ ಅಡಗಿಸಿಟ್ಟಿದ್ದ 1.53 ಲಕ್ಷ ಮೌಲ್ಯದ ಮದ್ಯದ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ, ಬಾರ್ ನಲ್ಲಿದ್ದ ಚರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆತ ನೀಡಿದ ಮಾಹಿತಿಯಂತೆ ಮದ್ಯವನ್ನು ತೊಕ್ಕೊಟ್ಟಿನ ಹೈ ಸ್ಪಿರಿಟ್ ನಿಂದ ತರಲಾಗಿತ್ತು. ಕಳೆದ ಮೂರು ತಿಂಗಳಿಂದ ಮದ್ಯವನ್ನು ಇಲ್ಲಿ ಸಂಗ್ರಹ ಮಾಡುತ್ತಿದ್ದು ಇಲ್ಲಿಂದ ಕೇರಳಕ್ಕೆ ಸಾಗಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಿಸರ್ಗ ಬಾರ್ ದಿವ್ಯರಾಜ್ ಶೆಟ್ಟಿ ಹೆಸರಲ್ಲಿ ಲೈಸನ್ಸ್ ಹೊಂದಿದ್ದು ರೋಹಿತ್ ಎಂಬವರು ಹೈಸ್ಪಿರಿಟ್ಸ್ ವೈನ್ ಶಾಪ್ ಮ್ಯಾನೇಜರ್ ಆಗಿದ್ದಾರೆ. ಇವರಿಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಅಬಕಾರಿ ಕಾಯ್ದೆ ಪ್ರಕಾರ ಅಕ್ರಮವಾಗಿ ಮದ್ಯ ಸಂಗ್ರಹಿಸಿದ ವಿರುದ್ಧ ಮತ್ತು ಎಪಿಡಮಿಕ್ ಏಕ್ಟ್ ನಡಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಸಂಗ್ರಹದಲ್ಲಿ ಬಾಸ್ ಹೆಸರಿನ ಬ್ಲಾಕ್ ಮತ್ತು ಗೋಲ್ಡ್ ವಿಸ್ಕಿ 1728 ಬಾಟಲ್ ಇದ್ದ 36 ಬಾಕ್ಸ್, 36 ಬಾಟಲ್ ಇದ್ದ ಬಿಜೋಯ್ಸ್ ವಿಸ್ಕಿ , 24 ಬಾಟಲ್ ಇದ್ದ ಡಿಎಸ್ ಪಿ ಬ್ಲಾಕ್ ಎರಡು ಬಾಕ್ಸ್ , 120 ಬಾಟಲ್ ಇದ್ದ ಹತ್ತು ಬಾಕ್ಸ್ ಬಾಸ್ ವಿಸ್ಕಿ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.