ಪುತ್ತೂರು: ಪೆರ್ಲಂಪಾಡಿ ಮೂಲದ 55 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದು ಅವರ ಮೃತ ದೇಹವನ್ನು ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.ಪೆರ್ಲಂಪಾಡಿವರಾಗಿದ್ದರೂ ಅವರು ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದರು. ಅಲ್ಲಿ ಕೊರೋನಾ ಸೋಂಕಿತರಾದ ವ್ಯಕ್ತಿ ಎ.30ರಂದು ಬೆಳಿಗ್ಗೆ ಸೋಂಕು ಉಲ್ಬಣಗೊಂಡು ಮೃತಪಟ್ಟಿದ್ದರು.
ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತಕ್ಷಣ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ಮೃತದೇಹವನ್ನು ಪುತ್ತೂರಿಗೆ ತಂದು ಶಾಸಕರ ವಾರ್ ರೂಮ್ ಸಹಾಯದೊಂದಿಗೆ ಮೃತರ ಮಕ್ಕಳು ಮತ್ತು ಸಂಬಂಧಿಕರು ಕೋವಿಡ್ ಮಾರ್ಗಸೂಚಿಯಂತೆ ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನಡೆಸಿದರು. ಶಾಸಕರ ವಾರ್ ರೂಮ್ ನ ತುರ್ತು ಸೇವಾ ವಿಭಾಗದ ಪಿ ಜಿ ಜಗನಿವಾಸ ರಾವ್, ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಮತ್ತಿತರರು ಸಹಕರಿಸಿದರು.
ಆ್ಯಂಬುಲೆನ್ಸ್ ಚಾಲಕರಿಗೆ ಸೇವಾ ಭಾರತಿಯಿಂದ ಊಟದ ವ್ಯವಸ್ಥೆ: ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಮೃತ ದೇಹವನ್ನು ತಂದ ಆ್ಯಂಬುಲೆನ್ಸ್ ಚಾಲಕರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಭಾರತಿ ಪುತ್ತೂರು ಇದರವತಿಯಿಂದ ಮಾಡಲಾಯಿತು.