ಮಂಗಳೂರು: ಕಾರಿನಲ್ಲಿ ಬಂದ ಇಬ್ಬರು ಮಹಿಳೆಯರು ಉಳ್ಳಾಲ ಸೇತುವೆಯ ಮೇಲಿನಿಂದ ನೇತ್ರಾವತಿ ನದಿಗೆ ಕಸ ಎಸೆದಿರುವ ವೀಡಿಯೊ ಇಂದು ಬೆಳಗ್ಗೆಯಿಂದ ಸಾಕಷ್ಟು ವೈರಲ್ ಆಗುತ್ತಿತ್ತು. ಇದೀಗ ಕಂಕನಾಡಿ ಠಾಣೆಯ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇಂದು ಬೆಳಗ್ಗೆ ಕೆಂಪು ಬಣ್ಣದ(KAO3NB4648)
ಕಾರೊಂದು ನೇತ್ರಾವತಿ ಸೇತುವೆಯ ಮೇಲೆ ಬಂದು ನಿಂತಿದೆ. ಅದರಿಂದ ಇಳಿದ ಇಬ್ಬರು ಮಹಿಳೆಯರು ಸೇತುವೆಯ ಮೇಲಿನಿಂದ ಕಸವನ್ನು ನದಿಗೆ ಎಸೆದಿದ್ದಾರೆ. ಈ ದೃಶ್ಯವನ್ನು ಹಿಂಬದಿ ಕಾರಿನಲ್ಲಿದ್ದವರು
ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಈ ಬಗ್ಗೆ ಮಂಗಳೂರು ಮನಪಾ ಹಿರಿಯ ಆರೋಗ್ಯ ನಿರೀಕ್ಷಕರ ದೂರಿನನ್ವಯ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣವನ್ನು ಭೇದಿಸಿರುವ ಪೊಲೀಸರು ಕಾರನ್ನು ವಶಪಡಿಸಿದ್ದಾರೆ. ಅಲ್ಲದೆ, ಇಬ್ಬರೂ ಮಹಿಳೆಯರು ಮಾಸ್ಟ್ ಸರಿಯಾಗಿ ಧಾರಣೆ ಮಾಡದಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ.