ಮಂಗಳೂರು : ದಾರಿ ಮಧ್ಯೆ ಇದ್ದ ಸ್ಕೂಟರನ್ನು ತಪ್ಪಿಸಲು ಹೋಗಿ ಬೈಕ್ ಸವಾರ ನಿಯಂತ್ರಣಕ್ಕೆ ಸಿಗದೆ ಪಲ್ಟಿ ಹೊಡೆದ ಘಟನೆ ನಗರದ ಪದವಿನಂಗಡಿಯಲ್ಲಿ ಇಂದು ಬೆಳಗ್ಗೆ ನಡೆದಿದ್ದು ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೋಂದೆಲ್ ಕಡೆಯಿಂದ ಕೆಟಿಎಂ ಬೈಕಿನಲ್ಲಿ ವೇಗವಾಗಿ ಬರುತ್ತಿದ್ದ ಸವಾರ ಪ್ರಶಾಂತ್ ಎಂಬ ಯುವಕ ಅಡ್ಡಲಾಗಿ ಬಂದ ಸ್ಕೂಟರನ್ನು ತಪ್ಪಿಸಲು ಹೋಗಿ ಎರಡು ಪಲ್ಟಿ ಹೊಡೆದಿದ್ದಾನೆ. ಸ್ಕೂಟರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಿ, ಮತ್ತೊಂದು ಬೈಕಿನ ನಡುವೆ ನುಗ್ಗಿ ಬಂದ ಕೆಟಿಎಂ ಬೈಕ್ ಅಂಗಡಿಯೊಂದರ ಮುಂದೆ ಇರಿಸಿದ್ದ ಕೋಲ್ಡ್ ಡ್ರಿಂಕ್ಸ್ ಬಾಟಲಿಗಳ ಬಾಕ್ಸ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಬೈಕ್ ಪಲ್ಟಿಯಾಗಿ ಅಲ್ಲಿಯೇ ರಸ್ತೆಗೆ ಬಿದ್ದರೆ, ಸವಾರ ನೇರವಾಗಿ ಗಾಳಿಯಲ್ಲಿ ಮೇಲ್ಮುಖವಾಗಿ ಉಲ್ಟಾ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾನೆ. ಬೈಕ್ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ಹಿಂಭಾಗದಿಂದ ಬರುತ್ತಿದ್ದ ಮತ್ತೊಂದು ಬೈಕಿನ ಮೇಲೆ ತಾಗಿ ಅದು ಕೂಡ ಉರುಳಿ ಬಿದ್ದಿದೆ. ಅದರಲ್ಲಿದ್ದ ಸವಾರ ಸ್ವಲ್ಪ ಗಾಯಗೊಂಡು ಅಲ್ಲಿಂದ ಎದ್ದು ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೈಕ್ ಸವಾರ ಪ್ರಶಾಂತ್ ನೀರುಮಾರ್ಗದಲ್ಲಿ ಇರುವ ಚೇತನಾ ಎಂಟರ್ ಪ್ರೈಸಸ್ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಗಂಭೀರ ಗಾಯಗೊಂಡ ಆತನನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ತಾನೆ ಸವಾರ ಪ್ರಶಾಂತ್ ನ ಸಾವು ಸಂಭವಿಸಿದೆ ಎಂಬ ಮಾಹಿತಿ ಕೂಡ ದೊರಕಿದೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ