ಮಂಗಳೂರು : ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೆನ್ನಬೆಟ್ಟು ಗ್ರಾಮದ ಉಲ್ಲಂಜೆಯ ನಿವಾಸಿ ಮೊಹಮ್ಮದ್ ನೌಷದ್ ಯಾನೆ ಉಲ್ಲಂಜೆ (28) ಎಂದು ಗುರುತಿಸಲಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣ ಸೇರಿದಂತೆ 4 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಈತ, ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ನೌಷದ್ ನ್ನು ಕೇರಳದ ಕಾಸರಗೋಡು ಜಿಲ್ಲೆಯ ಮೀಯಾಪದವು ಬಳಿಯಿಂದ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಈತನು ಈ ಹಿಂದೆ 2018 ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣ, ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ, ಕರ್ತವ್ಯದಲ್ಲಿದ್ದ ಪೊಲೀಸರ ಕೊಲೆ ಯತ್ನ ನಡೆಸಿದ ಪ್ರಕರಣ ಹಾಗೂ ಮಹಿಳಾ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಶರಣಪ್ಪ ಭಂಡಾರಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.