ನಗರಸಭಾ ಹಿರಿಯ ಆರೋಗ್ಯಾಧಿಕಾರಿ ಶ್ವೇತ ಕಿರಣ್ ನೇತೃತ್ವ…!
ಪುತ್ತೂರು ನಗರದ ಮಹಾಮಾಯಿ ಟೆಂಪಲ್ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಇಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ನೆಲ್ಲಿಕಟ್ಟೆಯ ಲಾಕ್ ಡೌನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಸೇರಿಸಿದ್ದಾರೆ.
ಹಾಸನ ಮೂಲದ ಗೋಪಾಲ ಗೌಡ ಎಂಬ ಹೆಸರಿನ 65 ವರ್ಷ ಪ್ರಾಯದ ವ್ಯಕ್ತಿ ಕಳೆದ ಹಲವು ಸಮಯದಿಂದ ಪುತ್ತೂರಿನಲ್ಲೇ ಇದ್ದು ಯಾರಾದರೂ ಏನಾದರೂ ಕೊಟ್ಟರೆ ತಿಂದು ರಸ್ತೆ ಬದಿ ಮಲಗುತ್ತಾ ದಿನ ದೂಡುತ್ತಿದ್ದರು.
ಬುಧವಾರ ಈ ವೃದ್ಧ ರಸ್ತೆ ಬದಿ ಸಂಕಷ್ಟ ಸ್ಥಿತಿಯಲ್ಲಿ ಇರುವ ಬಗ್ಗೆ ಸಾರ್ವಜನಿಕರು ನಗರಸಭೆ ಪೌರಾಯುಕ್ತರಾದ ರೂಪಾ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಜಾಗೃತರಾದ ಅವರು ಅಧಿಕಾರಿಗಳು, ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿದರು.
ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ನೇತೃತ್ವದ ತಂಡ ಸಿಬ್ಬಂದಿಗಳ ಸಹಕಾರದಿಂದ ನಿರ್ಗತಿಕ ವೃದ್ಧನನ್ಬು ಸರಕಾರಿ ಆಸ್ಪತ್ರೆಗೆ ಕರೆತಂದರು. ವೃದ್ಧನ ಮೈಮೇಲೆ ಬಿದ್ದು ಗಾಯಗೊಂಡ ರೀತಿ ರಕ್ತ ಸುರಿಯುತ್ತಿದ್ದು, ಅದಕ್ಕೆ ಪ್ರ ಥಮ ಚಿಕಿತ್ಸೆ ಕೊಡಿಸಲಾಯಿತು.ಬಳಿಕ ಹೊಸ ಉಡುಪು ತರಿಸಿ ವೃದ್ಧನಿಗೆ ತೊಡಿಸಲಾಯಿತು.
ಬಳಿಕ ನೆಲ್ಲಿಕಟ್ಟೆಯಲ್ಲಿರುವ ತಾತ್ಕಾಲಿಕ ಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.ವೃದ್ಧನಿಗೆ ಬೇಕಾದ ವೈದ್ಯಕೀಯ ನೆರವು, ಆಹಾರ ಮತ್ತಿತರ ಮೂಲ ಸೌಕರ್ಯಗಳನ್ನು ಪಾಲನಾ ಕೇಂದ್ರಕ್ಕೆ ತಲುಪಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲೂ ಈ ವೃದ್ಧನಿಗೆ ನಗರಸಭೆ ವತಿಯಿಂದ ನೆರವು ಕಲ್ಪಿಸಲಾಗಿತ್ತು.
ಪ್ರೀತಿ ಡ್ರೆಸ್ಸೆಸ್ ಇವರು ಭಿಕ್ಷುಕರಿಗೆ ಹೊಸ ಬಟ್ಟೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸಿಬ್ಬಂದಿಗಳಾದ ಚಿದಾನಂದ್, ಐತಪ್ಪ, ನಾಗೇಶ್ ಹಾಗೂ ಇತರ ಕಾರ್ಮಿಕರು ಸಹಕರಿಸಿದರು.