ರಾಮನಗರ: ಫ್ರೆಂಡ್ಶಿಪ್ ಅಂತ ಬಂದಾಗ ಯುವಕರು ಒಂದು ಹೆಜ್ಜೆ ಮುಂದೆ ಇರ್ತಾರೆ. ಅದೇನೆ ಬರಲಿ ಸ್ನೇಹಿತನಿಗಾಗಿ ಪ್ರಾಣವನ್ನೇ ಪಣಕ್ಕಿಡುವ ಅದೆಷ್ಟೋ ಫ್ರೆಂಡ್ ಇರ್ತಾರೆ. ಆದರೆ ಇಲ್ಲೊಬ್ಬ ಫ್ರೆಂಡ್ ಏನು ಮಾಡಿದ್ದಾನೆ ಗೊತ್ತಾ? ತನ್ನ ಗರ್ಲ್ ಫ್ರೆಂಡನ್ನೇ ಸ್ನೇಹಿತನಿಗಾಗಿ ಗಿಫ್ಟ್ ಕೊಟ್ಟಿದ್ದಾನೆ.
ಅಂದಹಾಗೆಯೇ ಇದು ರಾಮನಗರ ಪಟ್ಟಣದ ಐಜೂರಿನಲ್ಲಿ ನಡೆದ ಘಟನೆ. ಈ ಘಟನೆಯಲ್ಲಿ ಮಂಜು(21), ರವಿ (33) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಕಿಡ್ನ್ಯಾಪ್ ಕೇಸಿನಲ್ಲಿ ಆರೋಪಿಗಳನ್ನು ಕಂಬಿ ಹಿಂದೆ ಸರಿಸಲಾಗಿದೆ.
ಗರ್ಲ್ ಫ್ರಂಡ್ ನನಗೆ ಕೊಡು : ಯುವತಿ ನ್ಯೂ ಎಕ್ಸ್ಪರ್ಟ್ ಕಾಲೇಜಿನಲ್ಲಿ ಓದುತ್ತಿದ್ದಳು. ಈ ವೇಳೆ ಮಂಜು ಎಂಬಾತನ ಪರಿಚಯವಾಗಿತ್ತು. ಪರಿಚಯ ಸಲುಗೆಯಾಗಿ ಬೆಳೆಯಿತು. ಜೊತೆಗಿರುವಾಗ ಯುವತಿ ಮತ್ತು ಮಂಜು ಫೋಟೊ ಕೂಡ ತೆಗೆಸಿಕೊಂಡಿದ್ದರು. ಹೀಗಿರುವಾಗ ಮಂಜು ತನ್ನ ಪ್ರಾಣ ಸ್ನೇಹಿತ ರವಿ ಬಳಿ ತಾನೊಬ್ಬ ಯುವತಿಯನ್ನು ಪಟಾಯಿಸಿದ್ದಾಗಿ ಹೇಳಿಕೊಂಡಿದ್ದನು. ಮಂಜು ಗರ್ಲ್ ಫ್ರಂಡ್ ತನಗೆ ಕೊಡುವಂತೆ ರವಿ ಕೇಳಿದ್ದನು.
ನಾನು ಮದುವೆ ಮಾಡಿಕೊಳ್ಳಬೇಕು : ಅಂದಹಾಗೆಯೇ, ಮಂಜು ಹಾಗೂ ರವಿ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ನಾನು ಮದುವೆ ಮಾಡಿಕೊಳ್ಳಬೇಕು. ನಿನ್ನ ಗರ್ಲ್ ಫ್ರಂಡ್ ನಮಗೆ ಕೊಡು ಎಂದು ರವಿ ಕೇಳಿದ್ದಾನೆ.
4 ವರ್ಷದ ಹಿಂದೆಯೇ ಬೇರೊಬ್ಬಳ ಜೊತೆ ಮದುವೆ : ಅಚ್ಚರಿಯ ಸಂಗತಿ ಎಂದರೆ ರವಿಗೆ ನಾಲ್ಕು ವರ್ಷದ ಹಿಂದೆಯೇ ಬೇರೊಬ್ಬಳು ಯುವತಿಯ ಜೊತೆ ಮದುವೆ ಆಗಿತ್ತು. ಆದರೂ ಸಹ ಮಂಜು ಬಳಿ ನಿನ್ನ ಗರ್ಲ್ ಫ್ರೆಂಡ್ ಕೊಡು ಎಂದು ಕೇಳಿದ್ದಾನೆ. ಮಾತ್ರವಲ್ಲದೆ, ನಿನೇನು ನೋಡಲು ಚೆನ್ನಾಗಿದ್ದೀಯಾ. ಎಷ್ಟು ಬೇಕಾದ್ರೂ ಹುಡುಗಿ ಪಟಾಯಿಸಬಹುದು. ನನಗೆ ನಿನ್ನ ಗರ್ಲ್ ಫ್ರಂಡ್ ಕೊಟ್ಟರೆ ಮದುವೆ ಆಗ್ತೀನಿ ಎಂದು ರವಿಯು ಮಂಜು ಬಳಿ ಹೇಳಿದ್ದಾನೆ.
ಫೋಟೊ ವೈರಲ್ ಮಾಡೋ ಬೆದರಿಕೆ : ರವಿ ಮಾತಿಗೆ ಮರುಳಾಗಿದ್ದ ಮಂಜು ಸೆ.19 ನೇ ತಾರೀಖಿಗೆ ಯುವತಿನ್ನ ಭೇಟಿಮಾಡಿಸಿದ್ದಾನೆ. ಇನ್ನು ಬಿಕಾಂ ಓದುತ್ತಿದ್ದ ಯುವತಿ ವಿದ್ಯಾಭ್ಯಾಸವನ್ನ ಅರ್ಧಕ್ಕೆ ಬಿಟ್ಟು ಬಂದಿದ್ದಾಳೆ. ಅತ್ತ ರವಿ ವಿನಾಯಕ ನಗರದ ಆಂಜನೇಯ ದ್ವಾರದ ಬಳಿ ಕಾದು ನಿಂತಿದ್ದಾನೆ. ಈ ವೇಳೆ ರವಿ ಜತೆ ತೆರಳಲು ಮಂಜು ಯುವತಿ ಬಳಿ ಹೇಳಿದ್ದಾನೆ. ಇಲ್ಲ, ಆಗಲ್ಲ ಎಂದಿದಕ್ಕೆ, ಜೊತೆಗಿರುವ ಫೋಟೊ ವೈರಲ್ ಮಾಡೋ ಬೆದರಿಕೆ ಹಾಕಿದ್ದಾನೆ.
15 ನಿಮಿಷದಲ್ಲೇ ಮದುವೆ : ಮಂಜು ಬ್ಲ್ಯಾಕ್ ಮೇಲ್ ಗೆ ಹೆದರಿ ಯುವತಿ ರವಿ ಜತೆ ತೆರಳಿದ್ದಾಳೆ. ಬಳಿಕ ನಿರ್ಜನ ಪ್ರದೇಶಕ್ಕೆ ಯುವತಿಯನ್ನ ರವಿ ಕರೆದುಕೊಂಡು ಹೋಗಿದ್ದಾನೆ. ಯುವತಿ ಕರೆದುಕೊಂಡ ಬಂದ 15 ನಿಮಿಷದಲ್ಲೇ ಮದುವೆ ಆಗಿದ್ದಾನೆ.
ಚಾಮರಾಜನಗರಕ್ಕೆ ಹೊರಟ ಜೋಡಿ : ಯುವತಿಗೆ ತಾಯತ ದಾರ ಕಟ್ಟಿ ಅದೇ ತಾಳಿ ಎಂದು ಹೇಳಿದ್ದಾನೆ. ಬಳಿಕ ನಾನು ನಿನ್ನ ಮದುವೆ ಆಗಿದ್ದೀನಿ, ನಾನೇ ನಿನ್ನ ಗಂಡ ಎಂದು ಹೇಳಿದ್ದಾನೆ. ನಂತರ ತನ್ನ ಊರಲ್ಲಿ ಇದ್ದರೆ ಯುವತಿ ಮನೆಯವರು ಬರುತ್ತಾರೆ ಎಂದು ಸಂಜೆ ವೇಳೆ ಚಾಮರಾಜನಗರ ನಗರಕ್ಕೆ ತೆರಳಿದ್ದಾನೆ. ತನ್ನ ಸಂಬಂಧಿಕ ಮನೆಗೆ ತೆರಳಿ ಉಳಿದುಕೊಳ್ಳಲು ಜಾಗ ಕೇಳಿದ್ದಾನೆ.
ಅತ್ತ ಯುವತಿ ಪರಿಸ್ಥಿತಿ ಕಂಡು ಸಂಬಂಧಿಕರು ಅವಕಾಶ ಕೊಡದೆ ಸುಮ್ಮನಾಗಿದ್ದಾರೆ. ಇವತ್ತು ಬೇಡ, ಬೆಳಿಗ್ಗೆ ಬಾ ಎಂದು ರವಿಯ ಸಂಬಂಧಿಕರು ಹೇಳಿದ್ದಾರೆ. ಮತ್ತೆ ರಾತ್ರಿ ಚಾಮರಾಜನಗರ ನಗರದಿಂದ ತುಮಕೂರಿಗೆ ತೆರಳಿದ್ದಾರೆ.ರವಿ ಅಲ್ಲಿಂದ ನೇರವಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲಿಕನ ಬಳಿ ತೆರಳಿದ್ದಾನೆ. ಮಾಲೀಕನ ಬಳಿ ಬಹಳ ವರ್ಷದಿಂದ ಯುವತಿಯನ್ನ ಲವ್ ಮಾಡುತ್ತಿದ್ದೆ, ಮದುವೆ ಆಗಿದ್ದೀನಿ ಎಂದು ಹೇಳಿದ್ದಾನೆ.
ಯುವತಿಯನ್ನು ರಕ್ಷಣೆ ಮಾಡಿದ ಪೊಲೀಸರು : ಇನ್ನು ಯುವತಿಯನ್ನ ರವಿ ಬಲವಂತವಾಗಿ ಕೂಡಿ ಹಾಕಿದ್ದನು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಐಜೂರು ಪೊಲೀಸರು ರವಿಯನ್ನ ಟ್ರ್ಯಾಕ್ ಮಾಡಿದ್ದಾರೆ. ಬಳಿಕ ಮಂಜು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆಗೆ ಮಂಜು ಯುವತಿ ಫೊಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ಹೇಳಿದ್ದಾನೆ. ಬಳಿಕ ರವಿಯನ್ನು ವಶಕ್ಕೆ ಪಡೆದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಐಜೂರು ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ನೊಂದ ಯುವತಿಯನ್ನ ತಂದೆ ತಾಯಿಗೊಪ್ಪಿಸುವ ಮೂಲಕ ಪೊಲೀಸರು ಮನವೀಯತೆ ಮೆರೆದಿದ್ದಾರೆ.