ಬೆಳ್ತಂಗಡಿ : ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಟ್ಲಡ್ಕ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದೋಣಿಗೆ ಅಳವಡಿಸಲಾದ ಡ್ರಜ್ಜಿಂಗ್ ಯಂತ್ರದ ಸಹಾಯದಿಂದ ನದಿಯಿಂದ ಮರಳನ್ನು ತೆಗೆದು ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು,
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರಳು ತೆಗೆದು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ದಾಖಲೆ ಪತ್ರಗಳು ಇರುವುದಿಲ್ಲವಾಗಿ ತಿಳಿದು. ಆರೋಪಿಗಳು ಯಾವುದೆ ಪರವಾನಿಗೆ ಇಲ್ಲದೆ ಮರಳನ್ನು ನದಿಯಿಂದ ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಕಂಡು ಬಂದ ಮೇರೆಗೆ ಸೊತ್ತು ಸಮೇತ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ದೋಣಿಗೆ ಅಳವಡಿಸಿದ ಡ್ರಜ್ಜಿಂಗ್ ಮಿಷನ್- ಎಸ್ಕಾರ್ಟ್ ಕಂಪನಿಯ ನೊಂದಣಿಯಾಗದ ಕ್ರೇನ್, ಟಾಟಾ ಕಂಪನಿಯ ಟೋಯಿಂಗ್ ವಾಹನ,ಮಾರುತಿ ಕಂಪನಿಯ ಓಮಿನಿ, ಮೆಸ್ಟ್ರೋ ದ್ವಿಚಕ್ರ ವಾಹನ, ಆಕ್ಟಿವಾ ಹೋಂಡಾ, ಟಿವಿಎಸ್ ಅಪಾಚಿ ಮೋಟಾರು ಸೈಕಲ್ ಸುಮಾರು 20 ಟನ್ ಗಳಷ್ಟು ಮರಳು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಮೌಲ್ಯ ಮೂವತ್ತೊಂದು ಲಕ್ಷದ ಮೂವತ್ತಾರು ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ಸಂದೇಶ, ಜಯಂತ, ರಕ್ಷಿತ್, ಅವಿನಾಶ್, ಕೇಶವ, ಶರೀಫ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ವಿರುದ್ಧ ಅ.ಕ್ರ 27/2021 ಕಲಂ; ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ಉಪ ನಿಯಮ 42, 43, 44 ಮತ್ತು ಎಂ.ಎಂ.(ಆರ್.ಡಿ) ಕಾಯ್ದೆ 1957 ರ 4(1), 4(1)(ಎ) ಮತ್ತು 21(1)(1ಎ) ಮತ್ತು ಕಲಂ: 379 ಐ.ಪಿ.ಸಿ ಜೊತೆಗೆ 34 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.