ವಿಟ್ಲ: ಕೆಲಸ ಅರಸಿ ಬಂದ ತಂಡದಿಂದ ಬೇರ್ಪಟ್ಟು ದಿಕ್ಕು ತೋಚದೆ ಕಟ್ಟಡವೊಂದರಲ್ಲಿ ಅನ್ನ ನೀರಿಲ್ಲದೆ ಕಳೆದ ಕೆಲದಿನಗಳಿಂದ ವಾಸವಾಗಿದ್ದ ವ್ಯಕ್ತಿಯೋರ್ವರನ್ನು ನಾಗರೀಕರ ಸಹಕಾರದಲ್ಲಿ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರು ಮರಳಿ ಆ ವ್ಯಕ್ತಿಯ ಊರಿಗೆ ಕಳುಹಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಬೆಂಗಳೂರು ಮೂಲದ ಮಂಜು ಎಂಬವರು ತನ್ನ ಸ್ನೇಹಿತರೊಂದಿಗೆ ಕೆಲಸಕ್ಕಾಗಿ ವಿಟ್ಲ ಭಾಗಕ್ಕೆ ಬಂದಿದ್ದರು, ಆ ಬಳಿಕದ ಬೆಳವಣಿಗೆಯಲ್ಲಿ ಅವರಿಂದ ಬೆರ್ಪಟ್ಟ ಮಂಜುರವರು ದಿಕ್ಕು ತೋಚದೆ ಮಾಣಿಲ, ಪೆರುವಾಯಿ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡುತ್ತಿದ್ದರು. ಕಳೆದೆರಡು ದಿನಗಳಿಂದ ಪೆರುವಾಯಿ ಸಮೀಪದ ಕಟ್ಟಡವೊಂದರಲ್ಲಿ ವಾಸವಾಗಿದ್ದರು. ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದರು.
ಇದನ್ನು ಗಮನಿಸಿದ ಪೆರುವಾಯಿ ಸುತ್ತಮುತ್ತಲ ಕೆಲ ವ್ಯಕ್ತಿಗಳು ಅವರನ್ನು ಉಪಚರಿಸಿ, ಸ್ನಾನ ಮಾಡಿಸಿದರು. ಬಳಿಕ ಆ ವ್ಯಕ್ತಿಯ ಕುರಿತು ವಿಟ್ಲ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿ ಹಾಗೂ ಪ್ರೊಬೆಷನರಿ ಎಸ್.ಐ. ಮಂಜುನಾಥ್ ರವರ ನೇತೃತ್ವದ ಪೊಲೀಸರ ತಂಡ ಆ ವ್ಯಕ್ತಿಯನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಕೋವಿಡ್ ಟೆಸ್ಟ್ ನಡೆಸಿ, ಆ ವರದಿ ನೆಗೆಟೀವ್ ಬಂದ ಹಿನ್ನೆಲೆಯಲ್ಲಿ ಮತ್ತೆ ಆಹಾರ ನೀಡಿ, ಉಪಚರಿಸಿ ಬೆಂಗಳೂರು ತೆರಳುವ ಲಾರಿಯಲ್ಲಿ ಆವರ ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ಪೆರುವಾಯಿಯ ಯುವಕರ ಕಾಳಜಿಯ ಕೆಲಸ ಹಾಗೂ ವಿಟ್ಲ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರ ಮಾನವೀಯ ಕೆಲಸ ನಾಗರೀಕರಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.