ಕಲ್ಲಡ್ಕ: ಕಲ್ಲಡ್ಕದಲ್ಲಿ ತಾಲೂಕು ಪಂಚಾಯತ್ ಸದಸ್ಯರೊಬ್ಬರಿಗೆ ಎಎಸ್ಸೈ ಒಬ್ಬರು ಲಾಠಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ನಾಗರಿಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಇಂದು ಬೆಳಿಗ್ಗೆ ಕಲ್ಲಡ್ಕದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಬಿಜೆಪಿ ಸದಸ್ಯ ಮಹಾಬಲ ಆಳ್ವ ಗೋಳ್ತಮಜಲು ಮತ್ತು ಎ.ಎಸೈ ನಡುವೆ ಮಾತಿನ ಚಕಮಕಿ ನಡೆದಿದೆ.
ಮಹಾಬಲ ಆಳ್ವ ಅವರಿಗೆ ಕಲ್ಲಡ್ಕ ಪೇಟೆಯಲ್ಲಿ ಒಂಭತ್ತು ಗಂಟೆ ಆದ ನಂತರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಎಎಸೈ ಅವರು ಹೇಳಿದ್ದು, ಈ ಬಗ್ಗೆ ಮಹಾಬಲ ಆಳ್ವ ಮತ್ತು ಎಎಸೈ ನಡುವೆ ಮಾತಿಗೆ ಮಾತು ಬೆಳೆದು ಏಕಾಏಕಿ ಮಹಾಬಲ ಮತ್ತು ಎಎಸೈ ಹೊಡೆದಾಡಿಕೊಂಡಿದ್ದಾರೆ. ಮಹಾಬಲ ಅವರ ತಲೆಗೆ ಸಣ್ಣ ಗಾಯವಾಗಿದ್ದು, ಎಎಸೈ ಅವರಿಗೆ ಏನಾಗಿದೆ ಎಂದು ಇನ್ನೂ ಮಾಹಿತಿ ದೊರಕಿಲ್ಲ. ತದ ನಂತರ ಮಹಾಬಲರವರ ಬೆಂಬಲಿಗರು ಪೋಲಿಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.