ಬಂಟ್ವಾಳ: ಕೊರೋನಾ ಸೋಂಕು ದೃಢಪಟ್ಟಿದ್ದರೂ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪದಲ್ಲಿ ವಕೀಲ ಒಬ್ಬರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬೊಳ್ಳುಕಲ್ಲು ನಿವಾಸಿ, ನ್ಯಾಯವಾದಿ ರಾಜೇಶ್ ಪೂಜಾರಿ ಬೊಳ್ಳುಕಲ್ಲು ಎಂಬವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ಅವರಿಗೆ ಮೂರು ದಿನಗಳ ಹಿಂದೆ ಕೊರೋನ ಸೋಂಕು ದೃಢಪಟ್ಟಿತ್ತು. ಮನೆಯಿಂದ ಹೊರ ಹೋಗದೆ ಹೋಂ ಐಸೋಲೇಷನ್ ನಲ್ಲಿ ಇರುವಂತೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಅವರಿಗೆ ಸೂಚನೆ ನೀಡಿದ್ದರು. ಆದರೆ ಕಾರ್ಕಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ರಾಜೇಶ್ ಪೂಜಾರಿ ಭಾಗಿವಹಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಹಿತಿಯ ಮೇರೆಗೆ ಮಣಿನಾಲ್ಕೂರು ಗ್ರಾಮ ಪಂಚಾಯತ್ ಪಿ.ಡಿ.ಒ. ಮತ್ತು ಟಾಸ್ಕ್ ಫೋರ್ಸ್ ಸಮಿತಿಯವರು ರಾಜೇಶ್ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಬಳಿಕ ಪಿ.ಡಿ.ಒ. ನೀಡಿದ ದೂರಿನ ಮೇರೆಗೆ ರಾಜೇಶ್ ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.