ಮಂಗಳೂರು : ಭಗವಂತ ತೆಂಗು, ಬಾಳೆಹಣ್ಣು ಸೃಷ್ಟಿಸುವ ಮೂಲಕ ತನ್ನ ಭಕ್ತರು ಆರೋಗ್ಯ ಪೂರ್ಣವಾಗುವಂತೆ ಮಾಡಿದ್ದಾನೆ. ವಸ್ತುವಿನ ಮೌಲ್ಯ ಗೊತ್ತಾದರೆ ಅದರ ಮೇಲೆ ಪ್ರೀತಿ, ಗೌರವ ಬೆಳೆಯುತ್ತದೆ. ಇಲ್ಲದೇ ಹೋದರೆ ಆತ ಬೇರೆ ರೀತಿಯಲ್ಲಿ ವಿಮುಖನಾಗುತ್ತಾನೆ ಎಂದು ಮಂಗಳೂರು ಕಾವೂರು ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪರಮ ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಅವರು ನಗರದ ಮರೋಳಿಯ ಸೂರ್ಯ ನಾರಾಯಣ ದೇವಸ್ಥಾನದ ಬಳಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಚೇರಿ ಉದ್ಘಾಟನೆ ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.


ಅವರು ತೆಂಗಿನೆಣ್ಣೆ ಹಾಗೂ ತೆಂಗಿನ ಚಟ್ನಿಹುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿ, ಕೆಪಿಸಿಸಿ ಪ್ರಧಾನ ಕಾಯದರ್ಶಿ ಮಿಥುನ್ ರೈ ಮಾತನಾಡಿ, ತೆಂಗಿನ ಅವಲಂಬನೆಯಿಂದ ಬದುಕು ಹಸನಾಗುತ್ತದೆ. ಹಸಿರು ಉಳಿಸುವ ಜೊತೆಯಲ್ಲಿ ಸಾಕಷ್ಟು ಬದುಕುಗಳಿಗೆ ಉಸಿರು ನೀಡುವ ಕೆಲಸ ಅಭಿನಂದನೆಗೆ ಅರ್ಹವಾಗಿದ್ದು, ಈ ಸಾಧನೆಗೆ ಜಿಲ್ಲಾ ರಾಜ್ಯ ಮಟ್ಟದ ಪುರಸ್ಕಾರಗಳು ಸಲ್ಲಬೇಕು ಎಂದರು.

ತೆಂಗಿನ ಮರದ ಸಾವಯವ ಗೊಬ್ಬರವನ್ನು ಬಿಡುಗಡೆ ಮಾಡಿದ ಕಾಸರಗೋಡಿನ ಸಿಪಿಸಿಆರ್‌ಐ- ಐಸಿಎಆರ್ ನ ನಿರ್ದೇಶಕ ಡಾ. ಹೆಬ್ಬಾರ್ ಕೆ.ಬಿ. ಮಾತನಾಡಿ, ತೆಂಗಿನ ಮೌಲ್ಯವರ್ಧನೆ ಮಾಡುವುದರಿಂದ ಲಾಭ ತಂದುಕೊಡಬಹುದು ಈ ನಿಟ್ಟಿನಲ್ಲಿ ಸಂಸ್ಥೆ ಕೂಡ ಪ್ರಯತ್ನ ಪಡುತ್ತಿದೆ ಎಂದರು.

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ., ಉಪಾಧ್ಯಕ್ಷ ಗಿರಿಧರ್, ನ್ಯಾಚುರಲ್ ಐಸ್ಕ್ರೀಮ್ ನ ಮಾಲಕ ರಘುನಂದನ್ ಶ್ರೀನಿವಾಸ್ ಕಾಮತ್, ಸೂರ್ಯ ನಾರಾಯಣ ದೇವಸ್ಥಾನದ ಟ್ರಸ್ಟಿ ಉಮೇಶ್ ರೈ, ಮನಪಾ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಮನಪಾ ಸದಸ್ಯ ಕೇಶವ ಮರೋಳಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾಯದರ್ಶಿ ರವಿಕಿರಣ್ ಪುಣಚ, ದ.ಕ. ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ರೂಪೇಶ್ ರೈ ಅಲಿಮಾರ್, ಭಾರತೀಯ ವಿಕಾಸ್ ಟ್ರಸ್ಟ್‌ನ ಜಿಲ್ಲಾ ಮುಖ್ಯಸ್ಥ ಜೀವನ್, ಸಂಸ್ಥೆಯ ಸಿಇಒ ಚೇತನ್, ಪ್ರೇಮಾ, ಕುಸುಮಾ, ದರ್ಶನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ನವ್ಯಶ್ರೀ ಕಂಪನಿಯ ಪರಿಚಯ ಮಾಡಿದರು. ಸಂಸ್ಥೆಯ ಸಿಇಒ ಚೇತನ್ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ.ರಾಜೇಶ್ ಬೆಜ್ಜಂಗಳ ನಿರೂಪಿಸಿದರು.

