ಬಂಟ್ವಾಳ : ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಸರಗೋಡು ಕುಂಜತ್ತೂರು ನಿವಾಸಿ ಮಹಮ್ಮದ್ ಶಾಫಿ (28) ಬಂಧಿತ ವ್ಯಕ್ತಿ.
ನ.29 ರಂದು ಸಜೀಪ ಪೇಟೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸರಕಾರದ ಸೊತ್ತಾದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು, ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು, ಸದರಿ ಲಾರಿಯನ್ನು ತಡೆದು ವಿಚಾರಿಸಿದ್ದು, ಬಂಟ್ವಾಳ ಸಜೀಪದಲ್ಲಿ ಹೊಳೆ ಬದಿಯಲ್ಲಿ ಸಜೀಪದ ಅಬ್ದುಲ್ ರಹಿಮಾನ್ ಎಂಬವರು ಮರಳನ್ನು ಲೋಡ್ ಮಾಡಿ ಕಳುಹಿಸಿರುವುದಾಗಿ ತಿಳಿಸಿದ್ದು, ಸದರಿ ಲಾರಿ ಚಾಲಕನನ್ನು ಹಾಗೂ ಲಾರಿಯನ್ನು ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 118/2023 ಕಲಂ:379 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.