ಪುಂಜಾಲಕಟ್ಟೆ : ಶಾಲಾ ಬಾಲಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಸದರಿ ಬಾಲಕನು ಆತನ ಸೈಕಲನ್ನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನ.28 ರಂದು ಬೆಳಿಗ್ಗೆ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಪರಮೇಶ ಎಂಬವರು ಬಾಲಕನನ್ನು ವಿಚಾರಿಸಿ ಬಾಲಕನ ತಾಯಿಯ ಸಮಕ್ಷಮದಲ್ಲಿ ಬಾಲಕನಿಗೆ ಹೊಡೆದಿರುತ್ತಾರೆ.
ಈ ವೇಳೆ ಶಾಲಾ ಶಿಕ್ಷಕರಾದ ಪ್ರಮೀಳಾ ಮತ್ತು ರಮೇಶ್ ಎಂಬವರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿದ್ದು, ಹಲ್ಲೆ ನಡೆಸಿದ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸೈಕಲ್ ಕದ್ದು ಮಾರಾಟ ಮಾಡಿದ ಬಗ್ಗೆ ಕೇಸು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ಶಾಲೆಯಲ್ಲಿ ನಡೆದ ಹಲ್ಲೆಯಿಂದ ನ.30 ರಂದು ಬಾಲಕನಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕಲಂ: 323,324,506,114 ಜೊತೆಗೆ 34 ಐಪಿಸಿ ಮತ್ತು ಕಲಂ:75 ಬಾಲನ್ಯಾಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.