ಬೆಳಗಾವಿ : ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈಗಲೇ ಹೇಳಲು ಆಗುವುದಿಲ್ಲ. ಇಂತಹ ಕಾರ್ಯಾಚರಣೆಗಳಲ್ಲಿ ಸುಮಾರು ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಅಪಾಯ ಇದೆ ಎಂದು ತಿಳಿದರು ಸಾರ್ವಜನಿಕರ ಆಸ್ತಿ, ಜೀವ ರಕ್ಷಣೆಗೆ ಸೇವೆ ಮಾಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಹೀಗೆ ಆಗಿದೆ ಎನ್ನುವುದಕ್ಕಿಂತ ಹೇಗೆ ಆಗಿದೆ ಎಂದು ಪರಿಶೀಲಿಸಲಾಗುವುದು ಈಗಲೇ ಈ ಬಗ್ಗೆ ಹೇಳಲು ಆಗುವುದಿಲ್ಲ. ತನಿಖಾ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅರ್ಜುನ ಆನೆಗೆ ಅಂತಿಮ ವಿದಾಯ
ಇನ್ನು ಕಣ್ಣೀರಿಡುತ್ತಲೇ ಮೃತ ಅರ್ಜುನ ಆನೆಯ ಮಾವುತನಾಗಿರುವ ವಿನು ಪೂಜೆ ಸಲ್ಲಿಸಿದರು. ದುಃಖ ತುಂಬಿದ ಮನದಲ್ಲಿಯೇ ಪ್ರದಕ್ಷಿಣಿ ಹಾಕಿ, ದುಃಖದಲ್ಲೇ ಅಂತಿಮ ವಿಧಿವಿಧಾನ ನೆರವೇರಿಸಿದರು.
ಹಾಸನ ಜಿಲ್ಲಾಡಳಿತದಿಂದ ಕೂಡ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.
ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಡಿಸಿಎಫ್ ಮೋಹನ್ ಕುಮಾರ್ ಸಮ್ಕುಖದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಈ ವೇಳೆ ರಾಜ್ಯ ಅರಣ್ಯ ಇಲಾಖೆ ಭಾಗವಾಗಿ ಅಂತ್ಯಕ್ರಿಯೆಯಲ್ಲಿ ಸಹಾಯಕ ಅರಣ್ಯ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ತ ಹಾಜರಿದ್ದರು.