ಪಬ್ಜಿ ಆಟದಲ್ಲಿ ಪರಿಚಯವಾಗಿ, ಆ ಪರಿಚಯ ಪ್ರೀತಿಯಾಗಿ ಪ್ರಿಯಕರ ಸಚಿನ್ಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. 34 ವರ್ಷದ ಭಾರತೀಯ ಮಹಿಳೆ ಅಂಜು ಪತಿ, ಮಕ್ಕಳನ್ನು ಬಿಟ್ಟು ಪಾಕ್ ಪ್ರಿಯತಮನಿಗಾಗಿ ಖೈಬರ್ ಪಖ್ತುಂಖ್ವಾಗೆ ಹೋಗಿದ್ದರು. ಇದೀಗ ಭಾರತೀಯ ಯುವಕನೊಬ್ಬನಿಗೆ ಪಾಕಿಸ್ತಾನದಲ್ಲಿದ್ದ ಹುಡುಗಿಯ ಮೇಲೆ ಪ್ರೀತಿ ಶುರುವಾಗಿ ಇಬ್ಬರು ಮದುವೆಯಾಗಲು ರೆಡಿಯಾಗಿದ್ದಾರೆ.
ಸಮೀರ್ ಖಾನ್ ಭಾರತದ ಯುವಕ. ಜವೇರಿಯಾ ಖಾನಮ್ ಪಾಕಿಸ್ತಾನದ ಯುವತಿ.
ಕರಾಚಿಯಲ್ಲಿ ವಾಸಿಸುವ ಜವೇರಿಯಾ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವಾಸಿಸುವ ಸಮೀರ್‌ನನ್ನು ಪ್ರೀತಿಸುತ್ತಿದ್ದಳು. ಈ ಇಬ್ಬರು ಮದುವೆಯಾಗಬೇಕೆಂದು ನಿರ್ಧಾರ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಪ್ರೀತಿ ಮದುವೆಯ ತನಕ ಬಂದು ನಿಂತಿದೆ. ಇವರಿಬ್ಬರ ಪ್ರೀತಿ ಮದುವೆ ಆಗುವುದು ಅಷ್ಟು ಸುಲಭವಾಗಿರಲಿಲ್ಲ.
ಜವೇರಿಯಾ ಖಾನುಮ್ ಭಾರತಕ್ಕೆ ಬರಲು ಸತತ ಪ್ರಯತ್ನ ಪಟ್ಟಿದ್ದರು. ಈ ಹಿಂದೆ ಎರಡು ಬಾರಿ ಸಲ್ಲಿಸಿದ್ದ ವೀಸಾ ಅರ್ಜಿಗಳನ್ನು ಅಧಿಕಾರಿಗಳು ನಿರಾಕರಿಸಿದ್ದರು. ಕೋವಿಡ್ ಸಮಯದಲ್ಲಿ ಸುಮಾರು ಐದು ವರ್ಷಗಳ ಕಾಲ ಅವರ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಆಕೆಗೆ ವಿವಾಹಕ್ಕಾಗಿ 45 ದಿನಗಳ ವೀಸಾವನ್ನು ನೀಡಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನಿ ಹುಡುಗಿಗೆ ಭಾರತಕ್ಕೆ ಭೇಟಿ ನೀಡಲು 45 ದಿನಗಳ ವೀಸಾ ಸಿಕ್ಕಿದೆ ಎನ್ನಲಾಗಿದೆ.
ಇದೇ ವಿಚಾರವಾಗಿ ಮಾತಾಡಿದ ಜವೇರಿಯಾ ಖಾನುಮ್ ನಮ್ಮ ತಾಯಿಗೆ ಫೋನ್‌ನಲ್ಲಿ ಸಮೀರ್ ಖಾನ್ ಫೋಟೋ ತೋರಿಸಿ ಇವರನ್ನೇ ಮದುವೆಯಾಗುತ್ತೇನೆ ಎಂದಿದ್ದೆ. ನನ್ನ ತಾಯಿ ಮದುವೆಯಾಗಲು ಒಪ್ಪಿಕೊಂಡರು. ಬಳಿಕ ನನಗೆ 45 ದಿನಗಳ ವೀಸಾ ನೀಡಲಾಗಿದೆ. ನಾನು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಇಲ್ಲಿಗೆ ಬಂದ ನಂತರ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಜನವರಿ ಮೊದಲ ವಾರದಲ್ಲಿ ನಮ್ಮ ಮದುವೆ ನಡೆಯಲಿದೆ. ಐದು ವರ್ಷಗಳ ನಂತರ ನನಗೆ ವೀಸಾ ಸಿಕ್ಕಿದೆ. ಇದು ಸುಖಾಂತ್ಯ ಮತ್ತು ಸಂತೋಷದ ಆರಂಭ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.