ಪುತ್ತೂರು : ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು, ಅಪಹರಿಸಿ, ನಂತರ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಕಡಬದ ಯಜ್ಞೇಶ್ ಎಂಬಾತನಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಘಟನೆಯ ಹಿನ್ನಲೆ :
10/10/2020 ರಂದು ಬೆಳಿಗ್ಗೆ ಅಪ್ರಾಪ್ತ ಬಾಲಕಿಯು ತನ್ನ ಮನೆಯಿಂದ ಹೊರಡುವಾಗ ತನಗೆ ಇನ್ನು ಮೂರು ದಿನ ವಿಶೇಷ
ತರಗತಿಯಿದ್ದು, ಬೊಳುವಾರಿನ ತನ್ನ ಗೆಳತಿಯ ಮನೆಗೆ ಹೋಗಿ ಶುಕ್ರವಾರದಂದು ಸಂಜೆ ಮನೆಗೆ ಬರುವುದಾಗಿ ತಿಳಿಸಿ ಕಾಲೇಜಿಗೆ ಹೋಗಿರುತ್ತಾಳೆ. ಬಳಿಕ ಅಪ್ರಾಪ್ತ ಬಾಲಕಿಯು ಮನೆಗೆ ಫೋನ್ ಮಾಡದೆ ಇರುವುದರಿಂದ, ಅವಳ ಸ್ನೇಹಿತೆಯಲ್ಲಿ ವಿಚಾರಿಸಿದಾಗ, ಅವಳು ಸ್ನೇಹಿತೆಯ ಮನೆಗೆ ಹೋಗದೆ ಇರುವುದನ್ನು ತಿಳಿದು, ನಂತರ ಕಾಲೇಜಿನಲ್ಲಿ ವಿಚಾರಿಸಿದಾಗ, ಮಧ್ಯಾಹ್ನದವರೆಗೆ ಕಾಲೇಜಿಗೆ ಬಂದು ನಂತರ ಬಂದಿರುವುದಿಲ್ಲ ಎಂಬುದನ್ನು ತಿಳಿದು, ಅಪ್ರಾಪ್ತ ಬಾಲಕಿಯ ತಂದೆಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಖ್ಯೆಯ ಕಲಂ 363 ರಂತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಅಪ್ರಾಪ್ತ ಬಾಲಕಿಯು ತನ್ನ ತಂದೆಯೊಂದಿಗೆ ದಿನಾಂಕ 13/10/2023 ರಂದು ಪೊಲೀಸ್ ಠಾಣೆಗೆ ಹಾಜರಾಗಿ ಆರೋಪಿಯನ್ನು ಕಳೆದ ಮೂರು ತಿಂಗಳಿನಿಂದ ಪ್ರೀತಿಸುತ್ತಿದ್ದು, ದಿನಾಂಕ 10 /10 /2023 ರಂದು ಮಡಿಕೇರಿಗೆ ಹೋಗಿ ಅಲ್ಲಿ ಆರೋಪಿಯ ಅತ್ತೆ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿರುವುದಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಈ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 376
ಮತ್ತು ಪೋಕ್ಸೋ ಕಾಯಿದೆಯ ಕಲಂ 4ರನ್ವಯ ಪ್ರಕರಣ ದಾಖಲಿಸಿ, ತದನಂತರ ತನಿಖೆ ಮುಂದುವರಿಸಿ, ಆರೋಪಿಯನ್ನಲಾಗಿದ್ದ ಯಜ್ಞೆಶ್ ಎಂಬಾತನನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದರು.
ಆರೋಪಿಯು ತನ್ನ ಪರ ವಕೀಲರಾದ ಕಜೆ ಲಾ ಚೇಂಬರ್ಸ್ ನ ಮಹೇಶ್ ಕಜೆ ಅವರ ಮುಖಾಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್ ವಿ ರವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.