ಪುತ್ತೂರು: ಕೋವ್ಯಾಕ್ಸಿನ್ ಪಡೆಯಲು ಬಂದಿರುವ ಸಾರ್ವಜನಿಕರಿಗೆ ಟೋಕನ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ ಅಲ್ಲದೆ ಆರೋಗ್ಯ ಕೇಂದ್ರದ ವ್ಯಾಪ್ತಿ ಬಿಟ್ಟು ಹೊರಗಿನವರಿಗೂ ವ್ಯಾಕ್ಸಿನ್ ನೀಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೇ.೧೮ ರಂದು ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಕೋವಿಡ್ ೧೯ ಕೋರೋನಾ ವೈರಸ್ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ದು ಚುಚ್ಚುಮದ್ದು ನೀಡಲಾಗುತ್ತಿದ್ದು ಈಗಾಗಲೇ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದ ಕೋವ್ಯಾಕ್ಸಿನ್ ಚುಚ್ಚುಮದ್ದು ಪಡೆದುಕೊಂಡವರಿಗೆ ಎರಡನೇ ಹಂತದ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಒಟ್ಟು ೧೨೦ ಕೋವ್ಯಾಕ್ಸಿನ್ ಚುಚ್ಚುಮದ್ದು ಆಸ್ಪತ್ರೆಗೆ ಬಂದಿದ್ದು ಅದರಂತೆ ಮೊದಲ ಡೋಸ್ ಪಡೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಟೋಕನ್ ನೀಡುವಾಗ ಕ್ರಮಬದ್ಧವಾಗಿ ಟೋಕನ್ ನೀಡದೇ ಸುಮಾರು ೨೫ ರಷ್ಟು ಟೋಕನ್‌ಗಳನ್ನು ಆಸ್ಪತ್ರೆಯಲ್ಲೇ ಇಟ್ಟುಕೊಂಡಿದ್ದು ಅಲ್ಲದೆ ಸರತಿ ಸಾಲಲ್ಲಿ ನಿಂತವರಿಗೂ ಸರಿಯಾದ ರೀತಿಯಲ್ಲಿ ಟೋಕನ್ ನೀಡಿಲ್ಲ ಎಂದು ಜನರು ಆರೋಪಿಸಿದರು.
ಕ್ರಮಬದ್ಧವಿಲ್ಲದ ಟೋಕನ್ ವ್ಯವಸ್ಥೆ
ಬೆಳಿಗ್ಗೆ ೭ ಗಂಟೆಯ ಹೊತ್ತಿಗೆ ಆಸ್ಪತ್ರೆಗೆ ಬಂದು ಸರತಿ ಸಾಲಲ್ಲಿ ನಿಂತಿದ್ದವರಿಗೆ ೪೦ ರ ಮೇಲೆ ನಂಬರ್ ಕೊಡಲಾಗಿದೆ ಅಲ್ಲದೆ ಒಂದೇ ಮನೆಯ ಇಬ್ಬರು ಮಹಿಳೆಯರು ಸರತಿ ಸಾಲಲ್ಲಿ ನಿಂತಿದ್ದರೂ ಒಬ್ಬರಿಗೆ ೪೮ ನಂಬರ್ ಸಿಕ್ಕಿದರೆ ಅವರ ಹಿಂದಿನ ಮಹಿಳೆಗೆ ೬೦ ನಂಬರ್ ಸಿಕ್ಕಿದೆ. ನಾವು ಒಂದೇ ಮನೆಯವರು ಬೆಳಿಗ್ಗೆ ೭ ಗಂಟೆಗೆ ಬಂದು ಸಾಲು ನಿಂತಿದ್ದೇವೆ ನಾವು ಬರುವಾಗ ಆರೇಳು ಮಂದಿ ಮಾತ್ರ ಇದ್ದರು ಆದರೂ ನಮಗೆ ೪೮ ನಂಬರ್ ಸಿಕ್ಕಿದೆ ಎಂದು ವಳತ್ತಡ್ಕದ ನಾಗಮ್ಮ ಆರೋಪಿಸಿದರು. ಸರತಿ ಸಾಲಲ್ಲಿ ನಿಂತವರಿಗೆ ಆ ಕ್ಷಣಕ್ಕೆ ಟೋಕನ್ ನೀಡದೆ ಬಳಿಕ ಟೋಕನ್ ಹಂಚಿಕೆ ಮಾಡಲಾಗಿದೆ. ಹೀಗೆ ಮಾಡುವಾಗ ಟೋಕನ್ ಸಂಖ್ಯೆಯನ್ನು ಗಮನಿಸದೆ ಕೈ ಬಂದ ಟೋಕನ್ ಅನ್ನು ಹಂಚಿಕೆ ಮಾಡಲಾಗಿದೆ ಎಂದು ಜನರು ಆರೋಪಿಸಿದರು.
ಬೆಳ್ಳಂಬೆಳಗ್ಗೆ ಬಂದರೂ ಸಿಗಲಿಲ್ಲ 1 ನಂಬರ್
ಕೋವ್ಯಾಕ್ಸಿನ್ ಚುಚ್ಚುಮದ್ದಿನ ಎರಡನೇ ಡೋಸ್ ಬಂದಿರುವ ಬಗ್ಗೆ ಆಸ್ಪತ್ರೆಯಿಂದ ಮೊದಲ ಡೋಸ್ ಪಡೆದುಕೊಂಡವರಿಗೆ ತಿಳಿಸುವ ಕೆಲಸ ಆಗಿದ್ದು ಅದರಂತೆ ಕೆಲವು ಮಂದಿ ಬೆಳ್ಳಂಬೆಳಗ್ಗೆ ರಿಕ್ಷಾ ಮಾಡಿಕೊಂಡು ಬಂದು ಟೋಕನ್‌ಗಾಗಿ ಕ್ಯೂ ನಿಂತಿದ್ದರು. ಮೊದಲ ಸಾಲಲ್ಲಿ ನಿಂತವರಿಗೆ 1 ನಂಬರ್‌ನ ಬದಲು ಬೇರ್‍ಯಾವುದೋ ನಂಬರ್ ಸಿಕ್ಕಿದ್ದು ಜನರನ್ನು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಹಲವು ಮಂದಿ ವೈದ್ಯರು, ಆರೋಗ್ಯ ಕಾರ್ಯಕರ್ತೆಯರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆಯೂ ನಡೆಯಿತು. ಇಷ್ಟು ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ಟೋಕನ್ ಕೊಡುವ ವ್ಯವಸ್ಥೆ ಸರಿ ಮಾಡದೇ ಇರುವುದು ದುರಂತ, ಶ್ರೀಮಂತರಿಗೆ ಮೊದಲ ಆದ್ಯತೆ ಕೊಟ್ಟಿರುವುದು ಸರಿಯಲ್ಲ, ಬಡವರನ್ನು ಕಡೆಗಣಿಸಲಾಗಿದೆ ಇದು ಸರಿಯಾದ ಕ್ರಮವಲ್ಲ ಎಂದು ನೆಟ್ಟಾಳ ಬಾಲಕೃಷ್ಣ ರೈಯವರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಅಂತರವೇ ಇಲ್ಲ
ಕೋರೋನಾ ಸೋಂಕು ಹರಡುವುದನ್ನು ತಪ್ಪಿಸಲು ಸರಕಾರ, ಆರೋಗ್ಯ ಇಲಾಖೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಜಾರಿಗೆ ಮಾಡಿದ್ದರೂ ಇಲ್ಲಿ ಸಾಮಾಜಿಕ ಅಂತರವೇ ಕಂಡುಬರಲಿಲ್ಲ. ವ್ಯಾಕ್ಸಿನ್ ಪಡೆದುಕೊಳ್ಳುವ ಭರದಲ್ಲಿ ಜನರು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಬೇಕಾಬಿಟ್ಟಿಯಾಗಿ ಗುಂಪುಗೂಡಿದ್ದು ಕಂಡು ಬಂದಿದೆ. ಈ ಬಗ್ಗೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಕೇಂದ್ರದ ವ್ಯಾಪ್ತಿಬಿಟ್ಟು ಹೊರಗಿನವರಿಗೂ ವ್ಯಾಕ್ಸಿನ್
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂತಿಷ್ಟು ವ್ಯಾಪ್ತಿ ಇದ್ದು ಆ ವ್ಯಾಪ್ತಿಯ ಜನರಿಗೆ ವ್ಯಾಕ್ಸಿನ್ ಕೊಡುವಲ್ಲಿ ಮೊದಲ ಆದ್ಯತೆ ಕೊಡಬೇಕಾಗಿದೆ. ಆದರೆ ಮೇ.೧೮ ರಂದು ಪುತ್ತೂರು, ಬೆಳ್ತಂಗಡಿ ಭಾಗದ ಜನರು ಕೂಡ ಇಲ್ಲಿ ಬಂದು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಕೆಲವರು ತಮ್ಮ ಪ್ರಭಾವ ಬಳಸಿ ದೂರದ ಊರುಗಳಿಂದ ಬಂದು ವ್ಯಾಕ್ಸಿನ್ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ಕ್ಯೂ ಕೂಡ ಬೇಡ, ಬಡವರಿಗೆ ಮಾತ್ರ ಕ್ಯೂ, ಟೋಕನ್ ಇಂತಹ ವ್ಯವಸ್ಥೆ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿದೆ ಇದು ಸರಿಯಲ್ಲ ಈ ಬಗ್ಗೆ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೇರಿದ್ದ ಜನರು ಆಗ್ರಹಿಸಿದರು. ಶಾಸಕರಿಗೂ ವಿಷಯ ತಿಳಿಸುವ ಪ್ರಯತ್ನ ಸ್ಥಳದಲ್ಲಿ ಇದ್ದವರಿಂದ ನಡೆಯಿತು.
ನಾವು ಬೆಳಿಗ್ಗೆ ೭ ಗಂಟೆಗೆ ಬಂದಿದ್ದೇವೆ. ರಿಕ್ಷಾ ಮಾಡಿಕೊಂಡು ವಳತ್ತಡ್ಕದಿಂದ ಬಂದಿದ್ದೇವೆ, ನಾವು ಬರುವಾಗ ಕೇಲವ ೭ ಮಂದಿ ಮಾತ್ರ ಇದ್ದದ್ದು ಆದರೂ ನಮಗೆ ೪೮ ನಂಬರ್ ಸಿಕ್ಕಿದೆ. ನನ್ನ ಹಿಂದೆ ಇದ್ದವರಿಗೆ ೬೦ ನಂಬರ್ ಸಿಕ್ಕಿದೆ. ಇದು ಹೇಗೆ? ನಮ್ಮಿಂದ ನಂತರ ಬಂದವರು ವ್ಯಾಕ್ಸಿನ್ ಪಡೆದುಕೊಂಡು ತೆರಳಿದ್ದಾರೆ.ನಾವು ಬಡವರು ಹೀಗೆ ಮಾಡುವುದು ಸರಿಯಾ? – ನಾಗಮ್ಮ, ವ್ಯಾಕ್ಸಿನ್ ಪಡೆಯಲು ಬಂದವರು
ಟೋಕನ್ ಹಂಚಿಕೆಯಲ್ಲಾಗಲಿ, ವ್ಯಾಕ್ಸಿನ್ ಕೊಡುವ ವಿಷಯದಲ್ಲಾಗಲಿ ಯಾವುದೇ ಗೊಂದಲ ಆಗಿಲ್ಲ. ಎಲ್ಲರಿಗೂ ಸರಿಯಾದ ಕ್ರಮದಲ್ಲಿಯೇ ಟೋಕನ್ ನೀಡಲಾಗಿದೆ – ಡಾ.ಅಶೋಕ್ ರೈ, ತಾಲೂಕು ಆರೋಗ್ಯಾಧಿಕಾರಿ
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆದುಕೊಳ್ಳಲು ಒಟ್ಟು ೧೨೦ ಡೋಸ್ ಬಂದಿದೆ. ಟೋಕನ್ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲರಿಗೂ ಕ್ರಮಬದ್ಧವಾಗಿ ಟೋಕನ್ ಹಂಚಿಕೆ ಮಾಡಲಾಗಿದೆ. – ಡಾ.ಭವ್ಯಾ, ವೈದ್ಯಾಧಿಕಾರಿ