ಪೆರ್ನೆ : ಕಳೆಂಜ ಗ್ರಾಮದ ಗ್ರಾಮದೈವ ಶ್ರೀ ಒಟೆಚರಾಯ ಮತ್ತು ರಾಜನ್ ದೈವ ಕಲ್ಕುಡ ಹಾಗೂ ಪರಿವಾರ ದೈವಗಳ ವರ್ಷಾವಧಿ ದೊಂಪದಬಲಿ ನೇಮೋತ್ಸವವು ಫೆ.14 ರಂದು ನಡೆಯಲಿದೆ.
ಫೆ.14 ರಂದು ಬೆಳಿಗ್ಗೆ ಕಳೆಂಜ ಗುತ್ತಿನ ನಾಗ ಬನದಲ್ಲಿ ನಾಗ ತಂಬಿಲ, ನಂತರ ಗೊನೆ ಮುಹೂರ್ತ ನಡೆಯಲಿದೆ.
ಬೆಳಿಗ್ಗೆ 9.30ರ ಸುಮಾರಿಗೆ ಗುತ್ತಿನ ಕುಟುಂಬ ದೈವಗಳಾದ ಶ್ರೀ ನಾರ್ಲತ್ತಾಯ ಮತ್ತು ಒರ್ಮಲತ್ತಾಯ ಹಾಗೂ ಗ್ರಾಮದೈವ ಒಟೆಚರಾಯ- ಕಲ್ಕುಡ ದೈವಗಳಿಗೆ ಪರ್ವ., ನಂತರ ಕಂಬಳದ ದೈವಸ್ಥಾನದಲ್ಲಿ ಕಲ್ಕುಡ- ಕಲ್ಲುರ್ಟಿ ದೈವಗಳಿಗೆ ಪರ್ವ., 11 ಗಂಟೆಗೆ ಮಲ್ಲಡ್ಕ ಗಡುಪಾಡಿ ಜಾಗ ಮತ್ತು ಒಟೆಚಾರಾಯ ಬನದಲ್ಲಿ ಪರ್ವ ಹಾಗೂ ದೊಂಪದ ಬಲಿ ನಡೆಯುವ ಜಾಗದಲ್ಲಿ ಮುಹೂರ್ತ ಕಂಬ ಮತ್ತು ಕೋಳಿಕುಂಟ ನಡೆಯಲಿದೆ.
ತದನಂತರ 5 ಸುತ್ತಿನ ಚೆಂಡು., ರಾತ್ರಿ ಗಂಟೆ 7.30ಕ್ಕೆ ಕಳೆಂಜ ಗುತ್ತಿನಲ್ಲಿ ಕಲ್ಕುಡ ದೈವ ಪಾತ್ರಿಗೆ ಮತ್ತು ಪಂಚ ದೀವಟಿಕೆಯವರಿಗೆ ಎಣ್ಣೆ ಬೂಳ್ಯ ನಂತರ ಅನ್ನಸಂತರ್ಪಣೆ ನೇರವೆರಲಿದೆ.
ರಾತ್ರಿ 8:30 ಕ್ಕೆ ಕಳೆಂಜ ಗುತ್ತಿನ ಧರ್ಮಚಾವಡಿಯಲ್ಲಿ ಕಲ್ಕುಡ ದೈವದ ದರ್ಶನದೊಂದಿಗೆ ಶ್ರೀ ಒಟೆಚರಾಯ, ಕಲ್ಕುಡ ಮತ್ತು ಪರಿವಾರ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದೆ. ನಂತರ ದರಿ ಸೇವೆಯೊಂದಿಗೆ ಕಾಣಿಕೆ ಒಪ್ಪಿಸಿಕೊಳ್ಳುವುದು, ರಾತ್ರಿ ಗಂಟೆ 10ಕ್ಕೆ ದೊಂಪದಬಲಿ ದೈವಸ್ಥಾನದಲ್ಲಿ ಭಂಡಾರ ಏರಿ ದೈವಗಳಿಗೆ ಪರ್ವ. ನಂತರ ಮಹಮ್ಮಾಯಿ ದೇವಿಯ ಗೊಂದೋಲು ಪೂಜೆ ನಡೆಯಲಿದೆ.
ರಾತ್ರಿ ಗಂಟೆ 12 ಕ್ಕೆ ಒಟೆಚರಾಯ ಮತ್ತು ಕಲ್ಕುಡ ದೈವಗಳ ನೇಮೋತ್ಸವ, ಮುಂಜಾನೆ 4 ಗಂಟೆಗೆ ಕಲ್ಕುಡ ನೇಮವಾಗಿ ಕಲ್ಲುರ್ಟಿ, ಕಾಳಮ್ಮ, ಜಾವದೆ ದೈವಗಳ ಕಟ್ಟುಕಟ್ಟಳೆ ನೇಮೋತ್ಸವ ಜರುಗಲಿದೆ.
ಬೆಳ್ಳಿಗ್ಗೆ ಗಂಟೆ 5 ರ ಸುಮಾರಿಗೆ ಓಟೆಚಾರಾಯ ದೈವದ ಮುಖಾಂತರ ಮುಹೂರ್ತ ಕಂಬ ಸಡಿಲಿಸಿ ಕೋಳಿಕುಂಟ ತೆಗೆಯುವುದು.
ಬೆಳಿಗ್ಗೆ ಗಂಟೆ 6 ಕ್ಕೆ ಒಟೆಚರಾಯ ನೇಮವಾಗಿ ಮಹಾಂಕಾಳಿ, ಪೊಟ್ಟ ದೈವಗಳ ಕಟ್ಟು ಕಟ್ಟಳೆ ನೇಮ ಜರುಗಲಿದೆ. ನಂತರ ಕುರಿ ತಂಬಿಲ (ಪರ್ವ) ಹಾಗೂ ಭಂಡಾರ ಇಳಿದು ಕಳೆಂಜ ಗುತ್ತಿಗೆ ಭಂಡಾರ ನಿರ್ಗಮನವಾಗಲಿದೆ.
ಫೆ.15 ರಂದು ಮಧ್ಯಾಹ್ನ 12 ಗಂಟೆಗೆ ನದಿ ತಟದ ಅರ್ಬಿ ಗುಳಿಗ ಬನದಲ್ಲಿ ಮಹಮ್ಮಾಯಿಯ ಗದ್ದಿಗೆ ಏರಿ ಗಣಗಳಿಗೆ ಅಗೆಲು ಪರ್ವ ಮತ್ತು ಗುಳಿಗ ದೈವದ ನೇಮದಲ್ಲಿ ಗ್ರಾಮದ ಮಾರಿ ಓಡಿಸುವ ಕಾರ್ಯಕ್ರಮ ನಡೆಯಲಿದೆ.



























